ಪರಿಸರ ಪ್ರೇಮಿ ಸಮಿತಿಯಿಂದ ಪರಿಸರವಾದಿಗಳ ನಿರ್ನಾಮ ಪಣ
ಉಡುಪಿ: ಮುಂಬೈಯ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ, ಅವಿಭಜಿತ ದ.ಕ. ಜಿಲ್ಲೆಯ ಪರಿಸರವಾದಿಗಳ ನಿರ್ನಾಮಕ್ಕೆ ಪಣತೊಟ್ಟಿದ್ದರಿಂದ ಈ ಜಿಲ್ಲೆಯಲ್ಲಿ ಬಂಡವಾಳ ಹೂಡಲು ಹೂಡಿಕೆದಾರರಿಗೆ ವಿಶ್ವಾಸ ಮೂಡಿದೆ. ಜಿಲ್ಲೆಯು ಆರ್ಥಿಕ ಅಭಿವೃದ್ಧಿಯತ್ತ ಮುಖ ಮಾಡಿದೆ ಎಂದು ಸಮಿತಿ ಸಂಸ್ಥಾಪಕ ಜಯಕೃಷ್ಣ ಶೆಟ್ಟಿ ಹೇಳಿದ್ದಾರೆ.
ಮುಂಬೈಯಲ್ಲಿ ನೆಲೆಸಿರುವ ಉಡುಪಿ-ದ.ಕ. ಜಿಲ್ಲೆಯ ಕೆಲವು ಉದ್ಯಮಿಗಳು ಸೇರಿ ಆರಂಭಿಸಿರುವ ಈ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ 8ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಮುಂಬೈಯ ಇನ್ನೊಬ್ಬ ಉದ್ಯಮಿ ಎಂ.ಡಿ. ಶೆಟ್ಟಿ ಮಾತನಾಡಿ, ಸಮಿತಿಯ ಉದ್ದೇಶಗಳು ಸಮಾಜದ ಹಿತಕ್ಕಾಗಿಯೇ ಇವೆ, ಆದರೆ ಅವಿಭಜಿತ ದ.ಕ. ಜಿಲ್ಲೆಯ ಜನತೆ ಇದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ, ಅಲ್ಲದೇ ಯಾವುದೇ ವಿಚಾರಗಳನ್ನು ಕೂಲಂಕಷವಾಗಿ ಮನವರಿಕೆ ಮಾಡಿಕೊಳ್ಳುವ ತಾಳ್ಮೆ ಇಲ್ಲಿನ ಜನಪ್ರತಿನಿಧಿಗಳಲ್ಲಿಲ್ಲ, ಆದ್ದರಿಂದ ಇಲ್ಲಿ ಆರಂಭವಾಗಿರುವ ಅನೇಕ ಯೋಜನೆಗಳು ಸ್ಥಳೀಯ ಜನರನ್ನು ವಂಚಿಸಿ ದ್ರೋಹ ಬಗೆದಿವೆ ಎಂದು ಆರೋಪಿಸಿದರು.
ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಎಂ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಉಪಾಧ್ಯಕ್ಷರಾದ ಎಲ್.ವಿ. ಅವಿನ್, ಬಾಲಕೃಷ್ಣ ಪಿ. ಭಂಡಾರಿ ಮತ್ತಿತರ ಪದಾಧಿಕಾರಿಗಳು ಇದ್ದರು. ಉಪಾಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ ಸ್ವಾಗತಿಸಿದರು. ಗೌ.ಪ್ರ.ಕಾರ್ಯದರ್ಶಿ ನಿತ್ಯಾನಂದ ಡಿ. ಕೋಟ್ಯಾನ್ ವಾರ್ಷಿಕ ವರದಿ, ಗೌ.ಕೋಶಾಧಿಕಾರಿ ಐ.ಆರ್. ಶೆಟ್ಟಿ ಲೆಕ್ಕಪತ್ರ ಮಂಡಿಸಿದರು. ಸಮಿತಿಯ ಮಾಜಿ ಅಧ್ಯಕ್ಷರಾದ ಕೆ.ಪಿ. ಪ್ರಕಾಶ್ ಎಲ್. ಶೆಟ್ಟಿ, ಬಿ. ಸುಭಾಶ್ ಶೆಟ್ಟಿ, ವಿಶ್ವನಾಥ್ ಯು. ಮಾಡಾ, ಶಶಿಧರ್ ಕಾಪು, ಸುರೇಂದ್ರಕುಮಾರ್ ಹೆಗ್ಡೆ, ಹಿರಿಯಡ್ಕ ಮೋಹನ್ ದಾಸ್, ಲೋಕಪಾಲ್ ಬೆಂಗಳೂರು ಮತ್ತು ಸಮಿತಿಯ ದ.ಕ. ಜಿಲ್ಲಾ ಉಪಾಧ್ಯಕ್ಷ ಕೆ. ಪಿ. ಜಗದೀಶ್ ಅಧಿಕಾರಿ ಇದ್ದರು.
ಸಮಿತಿಯ ಅಗಲಿದ ಸದಸ್ಯರಾದ ಡಾ. ಕೆ. ಸಂಜೀವ ಶೆಟ್ಟಿ, ಪ್ರೊ. ಸೀತಾರಾಮ ಆರ್. ಶೆಟ್ಟಿ ಮತ್ತು ಪಿ. ರಮೇಶ್‌ಗೆ ಮೌನ ನಮನ ಸಲ್ಲಿಸಲಾಯಿತು. ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಯೆಯ್ಯಾಡಿ ವಂದಿಸಿದರು.