ಸುದ್ದಿ ಸಂಕ್ಷೇಪ
ರಕ್ಷಕರಿಗೆ ನಗದು ಪುರಸ್ಕಾರ
ಮಂಗಳೂರು: ನೀರಲ್ಲಿ ಕೊಚ್ಚಿ ಹೋಗುತ್ತಿದ್ದವರ ರಕ್ಷಿಸಿ ಸಾಹಸ ಮೆರೆದ ಪಾಂಡೇಶ್ವರ ಅಗ್ನಿಶಾಮಕದಳದ ಎಂ.ಪಿ.ಲೀಲಾಧರ ನಗದು ಪುರಸ್ಕಾರ ಲಭಿಸಿದೆ. 1997ರಲ್ಲಿ ಮಡಿಕೇರಿ ಅಗ್ನಿಶಾಮಕದಳ ಸೇರಿದ ಲೀಲಾಧರ್ ಈಗ ಪಾಂಡೇಶ್ವರ ಅಗ್ನಿಶಾಮಕದಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೆರೆಗಳಲ್ಲಿ ಬಿದ್ದವರನ್ನು ಪ್ರಾಣ ಒತ್ತೆ ಇಟ್ಟು ರಕ್ಷಿಸುವ ಮೂಲಕ ಅನೇಕ ಮಂದಿ ಜೀವರಕ್ಷಣೆ ಮಾಡಿದ್ದಾರೆ. 15 ವರ್ಷಗಳ ಸೇವಾವಧಿಯಲ್ಲಿ 30 ಬಾರಿ ನಗದು ಪುರಸ್ಕಾರ ಪಡೆದಿದ್ದಾರೆ.
ರಮೇಶ್ಗೆ ಪುರಸ್ಕಾರ: ಮಂಗಳೂರು: ಪಾಂಡೇಶ್ವರ ಅಗ್ನಿಶಾಮಕ ಠಾಣೆಯಲ್ಲಿ ಕೆಲಸಾಡುವ ಎಸ್.ರಮೇಶ್ ಅವರಿಗೆ ನಗದು ಪುರಸ್ಕಾರ ಲಭಿಸಿದೆ. ಬಾವಿಯಲ್ಲಿ ಮುಳುಗುತ್ತಿದ್ದವರನ್ನು ಮೇಲೆತ್ತಿ ರಕ್ಷಿಸುವ ಮೂಲಕ ಅನೇಕ ಮಂದಿ ಪ್ರಾಣ ಉಳಸಿದ್ದಾರೆ. 15 ವರ್ಷ ಸೇವಾವಧಿಯಲ್ಲಿ 11 ಬಾರಿ ನಗದು ಪುರಸ್ಕಾರ ಪಡೆದಿದ್ದಾರೆ.
ಶ್ರೀಗಳ ಉಪವಾಸಕ್ಕೆ ನಳಿನ್ ಬೆಂಬಲ
ಮಂಗಳೂರು: ಮೂಡುಬಿದಿರೆ ಜೈನ ಮಠಾಧೀಶ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು ಅ. 2 ರಂದು ಕೈಗೊಂಡಿರುವ ಉಪವಾಸ ಸತ್ಯಾಗ್ರಹಕ್ಕೆ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಬೆಂಬಲ ಸೂಚಿಸಿದ್ದಾರೆ. ರಾಜ್ಯ ಸರ್ಕಾರ ಮೂಡುಬಿದಿರೆ ಜೈನ ಬಸದಿಯ ವಿಗ್ರಹ ಕಳವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ನೈಜ ತನಿಖೆ ನಡೆಸಬೇಕು. ಇಲ್ಲಿಯವರೆಗೆ ನಡೆದಿರುವ ತನಿಖೆಯಲ್ಲಿ ಎಲ್ಲ ವಿಗ್ರಹಗಳನ್ನು ಪತ್ತೆ ಹಚ್ಚಲು ಸಾಧ್ಯವಾಗದೇ ಇರುವ ಕಾರಣ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವುದು ಅಗತ್ಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟೊಲಿಕ್ಗೆ ಕ್ಲೀನ್ಅಪ್ ಪ್ರಶಸ್ತಿ
ಮಂಗಳೂರು: ಅಂತಾರಾಷ್ಟ್ರೀಯ ತೀರಪ್ರದೇಶದ ನಿರ್ಮಲೀಕರಣ ಅಂಗವಾಗಿ ಭಾರತೀಯ ಕರಾವಳಿ ಭದ್ರತಾಪಡೆ ಕರ್ನಾಟಕ ಇತ್ತೀಚೆಗೆ ಪಣಂಬೂರು ಬೀಚ್ನಲ್ಲಿ ಆಯೋಜಿಸಿದ ಕರಾವಳಿ ಸ್ವಚ್ಛ ಮಾಡುವ ಜಾಗೃತಿ ಕಾರ್ಯಕ್ರಮದಲ್ಲಿ ಪಟ್ಟಣ ಅಧಿಕೃತ ಭಾಷೆ ಅನುಷ್ಠಾನ ಸಮಿತಿ(ಟೊಲಿಕ್) ಮಂಗಳೂರು 'ಕ್ಲೀನ್ಅಪ್' ಪ್ರಶಸ್ತಿ ತನ್ನದಾಗಿಸಿತು. ಭಾರತೀಯ ಕರಾವಳಿ ಪಡೆ ಡಿಐಜಿ ಎಂ.ಆರ್. ಶರ್ಮಾರವರಿಂದ ಟೊಲಿಕ್ ಕಾರ್ಯದರ್ಶಿ ಜಯಂತಿ ಪ್ರಸಾದ್ ಪ್ರಶಸ್ತಿ ಸ್ವೀಕರಿಸಿದರು.
ಗುಡ್ಡ ತೆರವಿಗೆ ಮನವಿ
ಮಂಗಳೂರು: ಮಂಜನಾಡಿ-ಕಲ್ಕಟ್ಟ ತಿರುವಿನಲ್ಲಿರುವ ಗುಡ್ಡಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಮುಖ್ಯಮಂತ್ರಿಯವರಿಗೆ ಭಾನುವಾರ ಸಾಹಿತಿ ಬಿ.ಎಸ್. ಹಸನಬ್ಬ ಅಮ್ಮೆಂಬಳ ಮನವಿ ಸಲ್ಲಿಸಿದರು. ಈ ರಸ್ತೆಯಲ್ಲಿ ನೂರಾರು ಸಾರ್ವಜನಿಕರು, ಮಕ್ಕಳು, ನೌಕರರು ತಮ್ಮ ಕೆಲಸಕ್ಕಾಗಿ ನಗರವನ್ನು ಅವಲಂಬಿಸಿರುತ್ತಾರೆ. ಇಲ್ಲಿನ ದೊಡ್ಡ ತಿರುವಿನಲ್ಲಿ ಇನ್ನೊಂದು ಬದಿಯಿಂದ ಬರುವ ವಾಹನಗಳು ಕಾಣಿಸದೆ ಚಾಲಕರು ಅಪಘಾತಕ್ಕೆ ಒಳಗಾಗುವ ಸನ್ನಿವೇಶ ಉಂಟಾಗುತ್ತಿದೆ. ರಾತ್ರಿ ಸಮಯದಲ್ಲಿ ವಾಹನ ಸವಾರರು ಈ ದೊಡ್ಡ ತಿರುವಿನಿಂದ ಸಮಸ್ಯೆ ಎದುರಿಸುತ್ತಿದ್ದು, ಮುಖ್ಯಮಂತ್ರಿಯವರು ಮನವಿಗೆ ಸ್ಪಂದಿಸಿ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ವಿನಂತಿಸಿದ್ದಾರೆ.
4ರಿಂದ ಚಿತ್ರಕಲಾ ಪ್ರದರ್ಶನ
ಮಂಗಳೂರು: ಪೂನಾದ ಕಲಾವಿದೆ ಸಂಗೀತ ಶಾ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಅ.4ರಂದು ನಗರದ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ನಡೆಯಲಿದೆ ಎಂದು ಆರ್ಟಿಸ್ಟ್ ಕಂಬೈನ್ ಸ್ಥಾಪಕ ಕಾರ್ಯದರ್ಶಿ ಗಣೇಶ ಸೋಮಯಾಜಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸಂಜೆ 5.30ಕ್ಕೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ ಉದ್ಘಾಟಿಸಲಿದ್ದು, ಎ.ಜೆ.ಆಸ್ಪತ್ರೆ ಉಪ ಡೀನ್ ಡಾ.ಪಿ.ಪಿ.ದೇವನ್, ಶಿಕ್ಷಣ ತಜ್ಞ ಪ್ರೊ.ಜಿ.ಎ.ಕೃಷ್ಣನ್ ಪಾಲ್ಗೊಳ್ಳುವರು.