ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಗಣಿ ಹಗರಣ ಆರೋಪಕ್ಕೆ ದಾಖಲೆ ಕೊಡಿ: ಪುಟ್ಟಸ್ವಾಮಿ ಸವಾಲು

Rashmi Kasaragodu
Updated On : 7 Apr 2014, 1:19 am

ಉಡುಪಿ:  ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಕ್ರಮ ಗಣಿಗಾರಿಕೆ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದಾಖಲೆಗಳ ಸಹಿತ ತನ್ನೊಂದಿಗೆ ಚರ್ಚೆಗೆ ಬರುವಂತೆ ವಿಧಾನ ಪರಿಷತ್ ಸದಸ್ಯ, ಯಡಿಯೂರಪ್ಪ ಆಪ್ತರಾಗಿರುವ ಬಿ.ಜೆ. ಪುಟ್ಟಸ್ವಾಮಿ ಸವಾಲು ಹಾಕಿದ್ದಾರೆ. ಭಾನುವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಗಣಿ ಹಗರಣದಲ್ಲಿ ಭಾಗಿಯಾಗಿರುವುದನ್ನು ರಾಹುಲ್ ಗಾಂಧಿ ದಾಖಲೆ ಸಹಿತ ಸಾಬೀತು ಮಾಡಿದರೆ ತಾನು ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ ಎಂದು ಘೋಷಿಸಿದರು.
'ಅಲ್ಪಸಂಖ್ಯಾತರು' ಅಸಾಂವಿಧಾನಿಕ, ಕಾಂಗ್ರೆಸ್ ಸೃಷ್ಟಿ: ಅಲ್ಪಸಂಖ್ಯಾತರು ಎನ್ನುವ ಪ್ರತ್ಯೇಕ ವರ್ಗದ ಪ್ರಸ್ತಾಪವೇ ಸಂವಿಧಾನದಲ್ಲಿ ಇಲ್ಲವೇ ಇಲ್ಲ, ಆದ್ದರಿಂದ ಅವರಿಗೆ ಪ್ರತ್ಯೇಕ ಮೀಸಲಾತಿಗೂ ಅವಕಾಶವೇ ಇಲ್ಲ. ಆದರೂ ಕಾಂಗ್ರೆಸ್ ಪಕ್ಷ ಸಂವಿಧಾನ ವಿರೋಧಿಯಾಗಿ ಅಲ್ಪಸಂಖ್ಯಾತರು ಎನ್ನುವ ವರ್ಗ ರಚಿಸಿ, ಅವರಿಗೆ ಮೀಸಲಾತಿ ನೀಡುವ ಮೂಲಕ ದೇಶವನ್ನೇ ವಿಭಜಿಸುತ್ತಿದೆ ಎಂದು ಮಾಜಿ ಸಹಕಾರಿ ಸಚಿವ, ಹಾಲಿ ವಿಧಾನ ಪರಿಷತ್ ಸದಸ್ಯ ಪುಟ್ಟಸ್ವಾಮಿ ಬಿ.ಜೆ. ಗಂಭೀರವಾಗಿ ಆರೋಪಿಸಿದ್ದಾರೆ.  ಬಿಜೆಪಿ ದೇಶ ವಿಭಜಿಸುತ್ತಿದೆ ಎಂದು ಸೋನಿಯಾ ಗಾಂಧಿ ಆರೋಪಕ್ಕೆ ಭಾನುವಾರ ಉಡುಪಿಯಲ್ಲಿ ಪ್ರತಿಕ್ರಿಯಿಸಿದ ಅವರು ಬಿಜೆಪಿ ರಾಷ್ಟ್ರೀಯವಾದದ ಮೂಲಕ ದೇಶ ಒಗ್ಗೂಡಿಸುತ್ತದೆ, ಹೊರತು ವಿಭಜಿಸುವುದಿಲ್ಲ. ಆದರೆ ಕಾಂಗ್ರೆಸ್ ತನ್ನ ವೋಟ್‌ಬ್ಯಾಂಕಿಗಾಗಿ ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರು ಎಂದು ಭಾರತೀಯರನ್ನು ಮತ್ತು ಭಾರತವನ್ನು ವಿಭಜಿಸುತ್ತಿದೆ ಮತ್ತು ಸಂಘರ್ಷಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು. ಸಂವಿದಾನದಲ್ಲಿ ಎಲ್ಲಾ ಹಿಂದುಳಿದ ವರ್ಗಗಳಿಗೆ ಮೀಸಲಾತಿ ದೊರೆಯಬೇಕು ಎಂದು ಹೇಳಿದೆ. ಆದರೆ, ಕಾಂಗ್ರೆಸ್ ಸರ್ಕಾರ ಸಂವಿಧಾನ ವಿರೋಧಿಯಾಗಿ ಅಲ್ಪಸಂಖ್ಯಾತರಿಗಾಗಿಯೇ ಪ್ರತ್ಯೇಕ ಸಾಚಾರ್ ಆಯೋಗ ನೇಮಿಸಿ, ವರದಿಯನ್ನು ಜಾರಿಗೊಳಿಸಲು ಯತ್ನಿಸುತ್ತಿದೆ ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement