ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಉಡುಪಿ ನಗರಕ್ಕೆ ಇನ್ನು ಒಂದು ತಿಂಗಳು ಮಾತ್ರ ನೀರು

Mainashree
Updated On : 10 Apr 2014, 10:39 am

ಉಡುಪಿ:  ಜಿಲ್ಲೆಯಲ್ಲಿ ಮೇ ತಿಂಗಳೊಳಗೆ ಮಳೆ ಬಂದರೆ ಬಚಾವ್, ಇಲ್ಲದಿದ್ದರೆ ಉಡುಪಿ ನಗರ ವಾಸಿಗಳು ತೀವ್ರ ಬರಗಾಲವನ್ನು ಅನುಭವಿಸಬೇಕಾಗಿದೆ. ಯಾಕೆಂದರೆ ಉಡುಪಿ ನಗರವಾಸಿಗಳಿಗೆ ನೀರು ಕುಡಿಸುವ ಸುವರ್ಣ ಬಹುತೇಕ ಪೂರ್ಣ ಬತ್ತಿದೆ.
 ಉಡುಪಿಗೆ ನೀರು ಪೂರೈಸಲು ಸುವರ್ಣ ನದಿಯ ಬಜೆ ಅಣೆಕಟ್ಟೆಯಲ್ಲಿ ಪ್ರಸ್ತುತ 0.85 ಎಂಸಿಎಂ (ಮಿಲಿಯನ್ ಕ್ಯೂಬಿಕ್ ಮೀಟರ್)ಗಳಷ್ಟು ಮಾತ್ರ ನೀರಿದ್ದು, ಮುಂದಿನ ಒಂದು ತಿಂಗಳ ಕಾಲಕ್ಕೆ ಈ ನೀರು ಸಾಕಾಗಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ. ಮುದ್ದುಮೋಹನ್ ತಿಳಿಸಿದ್ದಾರೆ.
ಅವರು ಮಂಗಳವಾರ ಬಜೆ ಅಣೆಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
 ಸುವರ್ಣ ನದಿಯ ಮೊದಲ ಹಂತದ ಬಜೆ ಅಣೆಕಟ್ಟೆಯಲ್ಲಿ 1.60 ಮತ್ತು 2ನೇ ಹಂತದ ಶಿರೂರು ಅಣೆಕಟ್ಟೆಯಲ್ಲಿ 0.65 ಎಂಸಿಎಂ ಸೇರಿ 2.25 ಎಂಸಿಎಂ ನೀರು ಸಂಗ್ರಹಿಸುವ ಸಾಮರ್ಥ್ಯ ಇದೆ. ಇದು 3 ತಿಂಗಳಿಗೆ ಸಾಕಾಗುತ್ತದೆ. ಆದರೆ, ಶಿರೂರು ಅಣೆಕಟ್ಟು ಸಂಪೂರ್ಣ ಒಣಗಿದೆ. ಬಜೆಯಲ್ಲಿರುವ 0.85 ಎಂಸಿಎಂ ನೀರನುಛ್ನ 2 ದಿನಗಳಿಗೊಮ್ಮೆ ಪೂರೈಕೆ ಮಾಡಿದರೆ ಉಡುಪಿ ನಗರವಾಸಿಗಳಿಗೆ 1 ತಿಂಗಳಿಗೆ ಸಾಕು ಎಂದು ಹೇಳಿದರು.
 ಏಪ್ರಿಲ್ ಕೊನೆ- ಮೇ ಮೊದಲ ವಾರದಲ್ಲಿ ಮಳೆಯಾಗುವ ನಿರೀಕ್ಷೆ ಇರುವುದರಿಂದ ಈ ಬಾರಿ ಕುಡಿಯುವ ನೀರಿನ ಸಮಸ್ಯೆಯಾಗಲಾರದು. ಮಳೆಯಾಗದಿದ್ದರೆ ನದಿಯಲ್ಲಿ ಅಲ್ಲಲ್ಲಿ ಬಂಡೆಗಳ ನಡುವೆ ಹೊಂಡಗಳಲ್ಲಿ ಸಂಗ್ರಹವಾಗಿರುವ ನೀರನ್ನು ಅಣೆಕಟ್ಟೆಯ ಕಡೆಗೆ ಹರಿಸುವುದಕ್ಕೆ (ಕಳೆದ ವರ್ಷದಂತೆ) ವ್ಯವಸ್ಥೆ ಮಾಡಲಾಗುವುದು ಎಂದೂ ಜಿಲ್ಲಾಧಿಕಾರಿ ತಿಳಿಸಿದರು.
ಕೃಷಿಕರಿಗೆ ಇಲ್ಲ, ಕೆಎಂಸಿಗೆ ಇದೆ: ಕುಡಿಯುವ ನೀರಿಗೆ ಮೊದಲ ಆದ್ಯತೆಯಾಗಿರುವುದರಿಂದ, ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ, ಈ ನದಿ ತಟದಲ್ಲಿ ಕೃಷಿಕರು ತಮ್ಮ ಕೃಷಿ ಚಟುವಟಿಕೆಗಳಿಗೆ ಬಳಸುವುದನ್ನು ನಿರ್ಬಂಧಿಸಲಾಗಿದೆ. ಉಡುಪಿ ನಗರಕ್ಕೆ ಹಾಗೂ ಸುತ್ತಲಿನ 7 ಗ್ರಾ.ಪಂ.ಗಳಿಗೆ 2 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ, ಸಾವಿರಾರು ಸಂಖ್ಯೆಯಲ್ಲಿ ರೋಗಿಗಳು, ವಿದ್ಯಾರ್ಥಿಗಳು ಇರುವ ಮಣಿಪಾಲ ವಿ.ವಿ.ಯ ಕೆಎಂಸಿ ಆಸ್ಪತ್ರೆಗೆ ಆದ್ಯತೆಯ ಮೇರೆಗೆ ಪ್ರತಿದಿನ 2ರಿಂದ 2.50 ಎಂಎಲ್ (ಮಿಲಿಯನ್) ಲೀಟರ್ ನೀರು ಪೂರೈಸಲಾಗುತ್ತಿದೆ. ನೀರಿನ ಸಾಕಷ್ಟು ಲಭ್ಯತೆ ಇರುವಾಗ ಕೆಎಂಸಿಗೆ ನಿತ್ಯ 4.50 ಎಂಎಲ್ ನೀರು ಒದಗಿಸುಲಾಗುತ್ತಿದೆ ಎಂದರು.
ರು. 2.50 ಕೋಟಿ ವೆಚ್ಚ: ಉಡುಪಿ ಜಿಲ್ಲೆಯಾದ್ಯಂತ ಕುಡಿಯುವ ನೀರು ಪೂರೈಕೆಗೆ 195 ಕಾಮಗಾರಿಗಳು ನಡೆಯುತ್ತಿವೆ. ನೀರಿನ ಸಮಸ್ಯೆ ಪರಿಹಾರಕ್ಕೆ ರು. 2.50 ಕೋಟಿ ಬಿಡುಗಡೆಯಾಗಿದೆ.
 ಕುಂದಾಪುರ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಅಲ್ಲಿನ 8 ಗ್ರಾ.ಪಂ. ಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಇನ್ನೂ 16 ಗ್ರಾ.ಪಂ. ಗಳಲ್ಲಿ ನೀರಿನ ಸಮಸ್ಯೆ ಇದ್ದು, ಅಲ್ಲಿಯೂ ಟ್ಯಾಂಕರ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಮುದ್ದುಮೋಹನ್ ತಿಳಿಸಿದರು. ಜಿಲ್ಲಾಧಿಕಾರಿ ಅವರೊಂದಿಗೆ ಉಡುಪಿ ನಗರಸಭೆ ಪೌರಾಯುಕ್ತ ಶ್ರೀಕಾಂತ್ ರಾವ್ ಹಾಗೂ ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement