'ಬಿಜೆಪಿಯೊಂದಿಗೆ ನವಭಾರತ ನಿರ್ಮಾಣಕ್ಕೆ ಮುಂದಾಗಿ'
ಉಡುಪಿ: ಎಂಜಿನಿಯರ್‌ಗಳು ಕಟ್ಟಡ ಕಟ್ಟುವ ಕಾಯಕದೊಂದಿಗೆ ಬಿಜೆಪಿಯೊಂದಿಗೆ ಕೈ ಜೋಡಿಸಿ ನವಭಾರತ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ. ಉದಯ ಕುಮಾರ್ ಶೆಟ್ಟಿ ಹೇಳಿದ್ದಾರೆ. ಅವರು ಜಿಲ್ಲಾ ಬಿಜೆಪಿ ಅಭಿಮಾನಿ ಎಂಜಿನಿಯರುಗಳ ಸಮಾವೇಶದಲ್ಲಿ ಮಾತನಾಡಿದರು.
100 ವರ್ಷಗಳ ಇತಿಹಾಸ ಇರುವ ಕಾಂಗ್ರೆಸ್ ಇಂದು100 ಸ್ಥಾನಗಳನ್ನು ಗಳಿಸದ ಸ್ಥಿತಿಗೆ ತಲುಪಿದೆ. ಅವರ ಈಗಿನ ಪ್ರಧಾನಿಯ ರೇಟಿಂಗ್ ಶೇ. 4ಕ್ಕೆ ಬಂದು ಮುಟ್ಟಿದೆ, ಮುಂದಿನ ಪ್ರಧಾನಿ ಯಾರು ಎಂಬುದು ಗೊತ್ತಿಲ್ಲ. ನಾವಿಕನಿಲ್ಲದ ಹಡಗಿನಂತಾಗಿದೆ ಕಾಂಗ್ರೆಸ್ ಸ್ಥಿತಿ. ಬೆಲೆ ಏರಿಕೆ, ಭ್ರಷ್ಟಾಚಾರ ಸಾರ್ವತ್ರಿಕ ದಾಖಲೆ ತಲುಪಿದೆ. ಕಾಂಗ್ರೆಸ್ ಆಡಳಿತದಲ್ಲಿ ನಡೆದ ಸಾಲುಸಾಲು ಹಗರಣಗಳು ಪ್ರಪಂಚದ ರಾಷ್ಟ್ರಗಳ ನಡುವೆ ಭಾರತದ ಗೌರವವನ್ನು ಹಾಳುಗೆಡವಿದೆ ಎಂದು ಆರೋಪಿಸಿದರು.
21ನೇ ಶತಮಾನ ಭಾರತದ ಶತಮಾನವಾಗಬೇಕು ಎಂದು ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಹೇಳಿದ್ದಾರೆ. ಅದು ಸಾಧ್ಯವಾಗಬೇಕಾದರೆ ಭಾರತಕ್ಕೆ ಸಮರ್ಥ ನಾಯಕನ ಅಗತ್ಯ ಇದೆ ಎಂದು ಹೇಳಿದರು. ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಪ್ರಧಾನ ಕಾರ್ಯದಶಿ ಕುತ್ಯಾರು ನವೀನ್ ಶೆಟ್ಟಿ, ಜಿಲ್ಲಾ ಬಿಜೆಪಿ ವಕ್ತಾರ ಮಟ್ಟಾರು ರತ್ನಾಕರ ಶೆಟ್ಟಿ ಇದ್ದರು.