ಮೇ 6ರಂದು ಮಂತ್ರಾಲಯ ಮಠಾಧೀಶರು ಉಡುಪಿಗೆ
ಉಡುಪಿ: ಮಂತ್ರಾಲಯದ ನೂತನ ಮಠಾಧೀಶರಾದ ಶ್ರೀ ಸುಭುದೇಂದ್ರ ತೀರ್ಥ ಶ್ರೀ ಪಾದರು ಪೀಠ ಸ್ವೀಕರಿಸಿದ ನಂತರ ಪ್ರಥಮ ಬಾರಿಗೆ ಶ್ರೀ ಕೃಷ್ಣನ ದರ್ಶನಕ್ಕೆ ಉಡುಪಿಗೆ ಮೇ 6ರಂದು ಆಗಮಿಸುತ್ತಿದ್ದು, ಅವರನ್ನು ಕೃಷ್ಣ ಮಠ ಮತ್ತು ಉಡುಪಿಯ ಭಕ್ತರು ಭವ್ಯವಾಗಿ ಬರ ಮಾಡಿಕೊಳ್ಳಲು ಸಿದ್ಧತೆ ನಡೆಸಲಾಗಿದೆ.
ಈ ಬಗ್ಗೆ ಕೃಷ್ಣ ಮಠ ಪರ್ಯಾಯ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥರು ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿದರು. ಅಂದು ಸಂಜೆ 6 ಗಂಟೆಗೆ ಉಡುಪಿ ಪುರಪ್ರವೇಶ ಮಾಡಲಿರುವ ಶ್ರೀಗಳನ್ನು ಜೋಡುಕಟ್ಟೆಯಲ್ಲಿ ಉಡುಪಿಯ ಗಣ್ಯರು, ಭಕ್ತರು ವೈಭವದಿಂದ ಸ್ವಾಗತಿಸಲಿದ್ದು, ನಂತರ ಬಿರುದಾವಳಿ, ವಾದ್ಯಘೋಷಗಳೊಂದಿಗೆ ಸಾಂಪ್ರದಾಯಿಕ ಮೆರವಣಿಗೆಯಲ್ಲಿ ರಥಬೀದಿಗೆ ಕರೆ ತರಲಾಗುವುದು. ನಂತರ ಅವರನ್ನು ಪರ್ಯಾಯ ಶ್ರೀಗಳು ಪರಂಪರೆಯಂತೆ ಸ್ವಾಗತಿಸಿ ಕೃಷ್ಣ - ಮುಖ್ಯಪ್ರಾಣರ ದರ್ಶನ ಮಾಡಿಸಲಿದ್ದಾರೆ. ಸಂಜೆ 6 ಗಂಟೆಗೆ ರಾಜಾಂಗಣದಲ್ಲಿ ಭವ್ಯ ಸಭೆಯನ್ನು ಆಯೋಜಿಸಲಾಗಿದ್ದು, ಅಲ್ಲಿ ರಾಘವೇಂದ್ರ ಮಠಾಧೀಶರಿಗೆ ಮಠದ ಪರವಾಗಿ ಹಾಗೂ ಉಡುಪಿ ಜನತೆಯ ಪರವಾಗಿ ಪೌರ ಸನ್ಮಾನ ನಡೆಸಲಾಗುವುದು ಎಂದು ಶ್ರೀಗಳು ತಿಳಿಸಿದ್ದಾರೆ. ರಾಘವೇಂದ್ರ ಶ್ರೀಗಳು ಮೇ 9ರವರೆಗೆ ಉಡುಪಿಯಲ್ಲಿ ಮೊಕ್ಕಾಂ ಮಾಡಲಿದ್ದು, 7ರಂದು ಕೃಷ್ಣ ಮಠದಲ್ಲಿ ತಮ್ಮ ಸಂಸ್ಥಾನ ಪೂಜೆ, 8ರಂದು ಸಂಜೆ 6 ಗಂಟೆಗೆ ರಥಬೀದಿಯಲ್ಲಿರುವ ರಾಘವೇಂದ್ರ ಮಠದಲ್ಲಿ ವಸಂತ ಪೂಜೆ ನೆರವೇರಿಸಲಿದ್ದಾರೆ. 7, 8ರಂದು ರಾಜಾಂಗಣದಲ್ಲಿ ವಿದ್ವತ್ ಸಭೆ ಆಯೋಜಿಸಲಾಗಿದೆ. ಮಂತ್ರಾಲಯ ಮಠಾಧೀಶರು, ಅಷ್ಟ ಮಠಾಧೀಶರು, ವಿದ್ವಾಂಸರು ಭಾಗವಹಿಸಲಿದ್ದು, ಶಾಸ್ತ್ರ, ಧರ್ಮ ಇತ್ಯಾದಿಗಳ ಬಗ್ಗೆ ಚರ್ಚಾಗೋಷ್ಠಿಗಳು ನಡೆಯಲಿವೆ ಎಂದು ಕಾಣಿಯೂರು ಶ್ರೀಗಳು ತಿಳಿಸಿದರು. ಉಡುಪಿ ರಾಘವೇಂದ್ರ ಮಠದ ವ್ಯವಸ್ಥಾಪಕರಾದ ಜಯತೀರ್ಥಾಚಾರ್ಯ, ಶ್ರೀಕಾಂತ ಉಪಾಧ್ಯಾಯ, ನಾಗರಾಜ ಉಪಾಧ್ಯಾಯ ಇದ್ದರು.