ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಉಕ್ಕುತ್ತಿರುವ ಅಂತರ್ಜಲ ಭೂಕಂಪನದ ಪರಿಣಾಮ

Rashmi Kasaragodu
Updated On : 30 Apr 2014, 1:01 am

ಮಣಿಪಾಲ: ಇಲ್ಲಿನ ಸರಳೆಬೆಟ್ಟು, ಬೈದರಬೆಟ್ಟು, ಕೊಡಂಗೆ ಮುಂತಾದ ಕಡೆಗಳಲ್ಲಿ ಕಳೆದ ಕೆಲವು ದಿನಗಳಿಂದ ಅಚ್ಚರಿ ಎಂಬಂತೆ ಭೂಮಿಯ ಹೊರಗೆ ಉಕ್ಕುತ್ತಿರುವ ಅಂತರ್ಜಲವನ್ನು ಭೂಕಂಪನದ ಪರಿಣಾಮವಾಗಿದೆ ಎಂದು ಮಂಗಳವಾರ ಭೂ ವಿಜ್ಞಾನ ತಜ್ಞರ ತಂಡ ಹೇಳಿದೆ.
ಈ ಅಂತರ್ಜಲ ಉಕ್ಕುವಿಕೆಯಿಂದ ಸ್ಥಳೀಯ ಜನರಲ್ಲಿ ಭೂಕಂಪದ ಭೀತಿ ಮೂಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರ ಆದೇಶದಂತೆ ಈ ತಂಡ ಈ ಪ್ರದೇಶಗಳನ್ನು ಪರಿಶೀಲಿಸಿದೆ.
ಈ ತಂಡದಲ್ಲಿದ್ದ ನಿವೃತ್ತ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ ಡಾ.ಬಿ.ಎಂ. ರವೀಂದ್ರ ಅವರು ಹೇಳುವಂತೆ, ಸುಮಾರು 25 ದಿನಗಳ ಹಿಂದೆ ಈ ಪ್ರದೇಶದಲ್ಲಿ ಅತ್ಯಂತ ಲಘ ಪ್ರಮಾಣದ ಭೂಕಂಪನ ಆಗಿದೆ. ಅದರ ಪರಿಣಾಮವಾಗಿ ಭೂಮಿಯೊಳಗೆ ಪದರಗಳ ವ್ಯತ್ಯಾಸದಿಂದ ಅಂತಜರ್ಲದ ದಿಕ್ಕು ಬದಲಾಗಿದೆ ಅದು ಮೇಲಕ್ಕೆ ಉಕ್ಕಿದೆ.
ಮಲ್ಪೆಯಿಂದ ಆಗುಂಬೆವರೆಗೆ ಭೂಮಿಯೊಳಗೆ ಒಂದು ದುರ್ಬಲ ಪದರ ಇದೆ. 2 ವರ್ಷಗಳ ಹಿಂದೆಯೂ ಇಲ್ಲಿ ಭೂಕಂಪವಾಗಿದ್ದು, ಜನರ ಗಮನಕ್ಕೆ ಬಂದಿತ್ತು.
 ಈ ಬಾರಿ ಆಗಿರುವ ಭೂಕಂಪ ಲಘುವಾಗಿದ್ದು ಜನರ ಗಮನಕ್ಕೆ ಬಂದಿಲ್ಲ. ಆದರೆ, ಭೂಮಿಯೊಳಗೆ ದುರ್ಬಲ ಪದರದಲ್ಲಿ ವ್ಯತ್ಯಾಸ ಆಗಿದೆ.
ಈ ಪ್ರದೇಶ ಉತ್ತಮ ಅಂತರ್ಜಲ ಇರುವ ಪ್ರದೇಶವಾಗಿದ್ದು, ಆ ನೀರು ಮೇಲಕ್ಕೆ ಬಂದಿದೆ. ಜನರು ಹೆದರುವ ಅಗತ್ಯ ಇಲ್ಲ. ಇದು ಬಳಕೆಗೆ ಯೋಗ್ಯವಾಗಿರುವ ಶುದ್ಧ ನೀರು ಎಂದವರು ಹೇಳಿದ್ದಾರೆ.
ಈ ತಂಡದಲ್ಲಿ ಉಡುಪಿ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನ ಶಾಸ್ತ್ರಜ್ಞ ನಿರಂಜನ್, ಭೂವಿಜ್ಞಾನ ಶಾಸ್ತ್ರಜ್ಞೆ ಲತ ಕುಲಕರ್ಣಿ, ಕಿರಿಯ ಎಂಜಿನಿಯರ್ ಮಂದಾ ಮೂರ್ತಿ ಇದ್ದರು.
ಅವರು ಪ್ರದೇಶದಲ್ಲೆಲ್ಲಾ ಸುತ್ತಾಡಿ ನೀರಿನ ಮಾದರಿಗಳನ್ನು ಸಂಗ್ರಹಿಸಿದ್ದಾರೆ.
ತೀರಾ ತಳಮಟ್ಟದ ಸಂಶೋಧನೆಗೆ ಸೂಕ್ತ ಪರಿಕರಗಳು ಜಿಲ್ಲಾ ಇಲಾಖೆಯಲ್ಲಿ ಲಭ್ಯ ಇಲ್ಲ ಎನ್ನುವ ಅಸಹಾಯಕತೆಯನ್ನೂ ತಂಡದ ಸದಸ್ಯರು ವ್ಯಕ್ತ ಪಡಿಸಿದರು.  
ಆದರೆ, ನಗರಸಭೆಯ ಪೌರಾಯುಕ್ತರು, ಕಳೆದ 25 ದಿನಗಳ ಹಿಂದೆ ಮಣಿಪಾಲದ ಈಶ್ವರ ನಗರ ಪ್ರದೇಶದಲ್ಲಿ ಮನೆಯೊಂದರ ಆವರಣದಲ್ಲಿ ಭಾರಿ ಆಳದ ಕೊಳವೆ ಬಾವಿಯನ್ನು ತೊಡಲಾಗಿದೆ. ಅದರ ಪರಿಣಾಮವಾಗಿ ಭೂಮಿಯೊಳಗೆ ಹರಿಯುವ ನೀರಿಗೆ ತಡೆಯುಂಟಾಗಿ ಅದು ಭೂಮಿ ಹೊರಗೆ ಉಕ್ಕಿದೆ ಎನ್ನುವ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಮಂಗಳವಾರ ಸಂಜೆ ಈ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ. ಇನ್ನು ಮಳೆಗಾಲದಲ್ಲಿ ಈ ಅಂತರ್ಜಲ ಉಕ್ಕುತ್ತದೆಯೋ ಅಥವಾ ನಿಲ್ಲುತ್ತದೆಯೋ ಎಂಬುದನ್ನು ಕಾದು ನೋಡಬೇಕಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement