ಟೋಲ್‌ಪ್ಲಾಝಾ ದಾಂದಲೆ: ಉನ್ನತ ಮಟ್ಟದ ಸಭೆ ರದ್ದು
ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್ ಪ್ಲಾಝಾ ಅವ್ಯವಸ್ಥೆ, ಸೌಲಭ್ಯಗಳ ಕೊರತೆ, ಸುರಕ್ಷಾ ಕ್ರಮಗಳ ಬಗ್ಗೆ ಬಂಟ್ವಾಳ ತಹಸೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಕರೆದಿದ್ದ ಉನ್ನತ ಮಟ್ಟದ ಸಭೆಯನ್ನು ಮಂಗಳೂರು ಉಪ ವಿಭಾಗಾಧಿಕಾರಿ ಡಾ. ಪ್ರಶಾಂತ್ ರದ್ದುಪಡಿಸಿದ ವಿದ್ಯಮಾನ ನಡೆದಿದೆ.
ಮಂಗಳವಾರ ಸಂಜೆ 6.30 ಸುಮಾರಿಗೆ ಸಭೆ ಕರೆಯಲಾಗಿತ್ತು. ಹೆದ್ದಾರಿ ಪ್ರಾಧಿಕಾರದ ಪಿಆರ್‌ಒ ಪಾಲ್ಗೊಳ್ಳದ ಕಾರಣಕ್ಕೆ ಸಭೆ ರದ್ದು ಪಡಿಸಲಾಯಿತು ಎಂದು ತಿಳಿದು ಬಂದಿದೆ.
ದಾಂದಲೆ ಹಿನ್ನೆಲೆ: ಕಳೆದ ಶನಿವಾರ ಟೋಲ್ ಪ್ಲಾಝಾದಲ್ಲಿ ನಡೆದಿದ್ದ ದಾಂದಲೆ ಹಾಗೂ ಅದರ ಹಿಂದಿನ ದಿನಗಳಲ್ಲಿ ಟೋಲ್ ಪ್ಲಾಝಾ ಸಿಬ್ಬಂದಿ ಮೇಲೆ ನಡೆದಿದ್ದ ಹಲ್ಲೆಯಿಂದಾಗಿ ಬ್ರಹ್ಮರಕೂಟ್ಲು ಟೋಲ್‌ಪ್ಲಾಝಾ ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಿರ್ದೇಶನದಂತೆ ಮಂಗಳೂರು ಉಪವಿಭಾಗಾಧಿಕಾರಿ ಡಾ.ಪ್ರಶಾಂತ್ ಹೆದ್ದಾರಿ ಪ್ರಾಧಿಕಾರ, ಟೋಲ್ ಗುತ್ತಿಗೆದಾರರು ಹಾಗೂ ಪೊಲೀಸ್ ಇಲಾಖೆಯ ಜಂಟಿ ಸಭೆ ಕರೆದಿದ್ದರು.
ಸಂಜೆ 6.30ರ ವರೆಗೂ ಸಭೆಗೆ ಅವಶ್ಯವಾಗಿ ಬರಬೇಕಾಗಿದ್ದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಬಾರದಿದ್ದುದರಿಂದ ಎ.ಸಿ. ಸಭೆ ರದ್ದುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಭೆಗೆ ಬಂಟ್ವಾಳ ಉಪವಿಭಾಗ ಡಿವೈಎಸ್ಪಿ ರಶ್ಮಿ ಪರಡ್ಡಿ ಸಹಿತ ಪೊಲೀಸ್ ಅಧಿಕಾರಿಗಳು, ಬಂಟ್ವಾಳ ತಹಸೀಲ್ದಾರ್ ಮಲ್ಲೇಸ್ವಾಮಿ, ಟೋಲ್ ಗುತ್ತಿಗೆದಾರ ಗೋಪಾಲಕೃಷ್ಣ ಮೆಲಾಂಟ ಹಾಜರಾಗಿದ್ದರು.
ಹೊಸ ಸಿಐ...: ಬಂಟ್ವಾಳ ವೃತ್ತನಿರೀಕ್ಷಕರ ವಲಯದಲ್ಲಿ ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳುವಲ್ಲಿ ವಿಫಲರಾದ ಆರೋಪದಲ್ಲಿ ಕರ್ತವ್ಯದಿಂದ ಅಮಾನತು ಗೊಂಡಿರುವ ಬಂಟ್ವಾಳ ವೃತ್ತ ನಿರೀಕ್ಷಕರ ರಾಜಶೇಖರ ಮೇಸ್ತ್ರಿ ಸ್ಥಾನಕ್ಕೆ ಪುತ್ತೂರು ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಕೆ. ಮಂಜಯ್ಯ ಅವರನ್ನು ನಿಯುಕ್ತಿಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಪಶ್ಚಿಮ ವಲಯ ಐಜಿಪಿ ಹಿತೇಂದ್ರ ಪ್ರಸಾದ್ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.
ಇನ್ನೂ ಸೆರೆಯಾಗಿಲ್ಲ: ದಾಂದಲೆ ಘಟನೆ ನಡೆದು ಮೂರು ದಿನಗಳು ಕಳೆದರೂ ಯಾವುದೇ ಆರೋಪಿ ಪೊಲೀಸರ ಬಲೆಗೆ ಬೀಳದಿರುವುದು ಅಚ್ಚರಿಗೆ ಕಾರಣವಾಗಿದೆ.