ರಾಮ್ದೇವ್ ವಿರುದ್ಧ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ
ಉಡುಪಿ: ಯೋಗಗುರು ಬಾಬಾ ರಾಮ್ ದೇವ್ ಅವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ದಲಿತರ ಕುರಿತು ಅವಹೇಳನಕಾರಿ ಹೇಳೀಕೆ ನೀಡಿದ್ದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಎಸ್.ಸಿ. ಎಸ್.ಟಿ. ಘಟಕ ಚಿತ್ತರಂಜನ್ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ಜನಾರ್ದನ ಭಂಡಾರ್ಕರ್ ಅವರು, ಖಾವಿ ಧರಿಸಿದ ವ್ಯಕ್ತಿಯೊಬ್ಬರು ಇನ್ನೊಬ್ಬ ವ್ಯಕ್ತಿಯ ಮಾನಹಾನಿ ಮಾಡುವ ಕೆಲಸ ಮಾಡುವುದು ಅತ್ಯಂತ ನಾಚಿಕೇಗೇಡಿನ ಸಂಗತಿ, ಬಾಬಾ ರಾಮ್ದೇವ್ ಧರಿಸಿದ ಖಾವಿಯ ಒಳಗೆ ಯಾವ ರೀತಿಯ ಉಗ್ರಗಾಮಿತನ ಅಡಗಿದೆ ಎಂಬುದು ಅವರ ಹೇಳಿಕೆಯಿಂದ ಬಯಲಾಗಿದೆ ಎಂದು ಅಭಿಪ್ರಾಯಪಟ್ಟರು.
ವಿದೇಶದಲ್ಲಿ ಐಶಾರಾಮಿ ದ್ವೀಪಗಳ ಒಡೆಯರಾಗಿರುವ ಬಾಬಾ ರಾಮ್ದೇವ್ ಮೋಜಿನ ಜೀವನ ನಡೆಸುವುದರೊಂದಿಗೆ ಸರ್ಕಾರಕ್ಕೆ ಕೋಟ್ಯಂತರ ರುಪಾಯಿ ತೆರಿಗೆ ವಂಚನೆ ಮಾಡುತ್ತಿದ್ದಾರೆ. ಮೋದಿಯ ಪತ್ನಿಯ ಬಗ್ಗೆ ಆರಂಭದಿಂದ ಗೌಪ್ಯತೆ ಕಾಪಾಡಿ ನಾಮಪತ್ರ ಸಲ್ಲಿಕೆ ವೇಳೆ ವಿಚಾರ ಬಹಿರಂಗಗೊಂಡಾಗ ಮೋದಿಯ ಪತ್ನಿಯನ್ನು ತನ್ನ ಆಶ್ರಮದಲ್ಲಿ ಬಾಬಾರಾಮ್ದೇವ್ ಬಚ್ಚಿಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದವು. ತನ್ನ ಪ್ರೀತಿಯ ಮೋದಿಗೆ ಪ್ರಧಾನಿಮಾಡುವ ಸಲುವಾಗಿ ದಲಿತರ ಬಗ್ಗೆ ಇಂತಹ ಮಾನಹಾನಿಕಾರಕ ಹೇಳಿಕೆ ನೀಡಿರುವ ರಾಮ್ದೇವ್ ವಿರುದ್ಧ ಕೇಂದ್ರ ಸರ್ಕಾರ ಉಗ್ರ ರೀತಿಯ ಕ್ರಮ ಕೈಗೊಳ್ಳುವುದರೊಂದಿಗೆ, ಅವರು ನಡೆಸುವ ಯೋಗ ಶಿಬಿರಗಳಿಗೆ ನಿರ್ಬಂಧ ಹೇರಬೇಕು ಮತ್ತು ಬಾಬಾ ರಾಮ್ದೇವ್ ಅವರನ್ನು ಕೂಡಲೇ ಬಂಧಿಸಿ ಅವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಅಮೃತ್ ಶೆಣೈ ಮಾತನಾಡಿ, ಖಾವಿ ಧರಿಸಿ ತ್ಯಾಗದ ಬಗ್ಗೆ ಮಾತನಾಡುವ ಬಾಬಾ ರಾಮ್ದೇವ್ ಅವರ ತ್ಯಾಗ ಏನು ಎಂಬುದು ಅವರ ವರ್ತನೆಯಿಂದ ಜಗಜ್ಜಾಹೀರಾಗಿದೆ. ಇಂತಹ ಡೋಂಗಿ ತ್ಯಾಗದ ಸ್ವಾಮೀಜಿಗಳಿಂದ ದೇಶದ ಐಕ್ಯತೆಗೆ ಪೆಟ್ಟು ಬೀಳುತ್ತದೆ. ಇಂತಹ ಸಮಾಜದ್ರೋಹಿ ಹೇಳಿಕೆ ನೀಡಿದ ಬಾಬಾ ರಾಮ್ದೇವ್ ಅವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದರು.
ಎಸ್ಸಿ ಎಸ್ಟಿ ಮೋರ್ಚಾದ ಅಧ್ಯಕ್ಷ ಎಸ್. ನಾರಾಯಣ್, ನಗರಸಭಾಧ್ಯಕ್ಷ ಯುವರಾಜ್, ಸ್ಥಾಯಿ ಸಮಿತಿ ಅಧ್ಯಕ್ಷೆ ಸೆಲಿನಾ ಕರ್ಕಡ, ಸದಸ್ಯರಾದ ರಮೇಶ್ ಕಾಂಚನ್, ತಾಪಂ ಸದಸ್ಯ ಉಮೇಶ್ ನಾಯಕ್, ಇತರ ಕಾಂಗ್ರೆಸ್ ನಾಯಕರಾದ ಗಣಪತಿ ಶೆಟ್ಟಿಗಾರ್, ಪ್ರಖ್ಯಾತ್ ಶೆಟ್ಟಿ, ಸತೀಶ್ ಅಮೀನ್ ಪಡುಕರೆ ಇನ್ನಿತರರು ಉಪಸ್ಥಿತರಿದ್ದರು.