ಸಂಚಾರಿ ಆಸ್ಪತ್ರೆ ಮುಟ್ಟದ ಕಡೆ ಆರೋಗ್ಯ ಬೂತ್: ಖಾದರ್
ಮಂಗಳೂರು: ಸಂಚಾರಿ ಆಸ್ಪತ್ರೆಗಳು ಮುಟ್ಟದ ಸ್ಥಳಗಳಿಗೆ ಹೆಲ್ತ್ ಕಿಯೋಸ್ಕ್ ಆರಂಭಿಸುವ ಯೋಜನೆ ಬೆಂಗಳೂರು, ಮಂಗಳೂರು ಮತ್ತು ಉಳ್ಳಾಲದಲ್ಲಿ ಜಾರಿಗೆ ಬರಲಿದೆ.
ಮೂರು ಕಡೆ 5 ಕಡೆ ಆರೋಗ್ಯ ಬೂತ್ ತೆರೆಯಲಾಗುವುದು. ಇದರಲ್ಲಿ ಆರೋಗ್ಯ ಶುಶ್ರೂಷಕಿ, ಔಷಧ, ಪ್ರಥಮ ಚಿಕಿತ್ಸೆ ಸಾಧನ ಸೇರಿದಂತೆ ಅತ್ಯಗತ್ಯ ಸೇವೆ ಲಭಿಸಲಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಯೋಜನೆಯಡಿ ಅಡಿ 7 ಕಡೆ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ, ಮೂರು ಕಡೆ ಮೇಲ್ದರ್ಜೆಗೇರಿಸಲಾಗುವುದು. ಕುಳಾಯಿ, ಕುಂಜತ್ತಬೈಲ್, ಶಕ್ತಿನಗರ, ಬಂದರ್, ಪಡೀಲ್, ಜೆಪ್ಪಿನಮೊಗರು, ಕದ್ರಿಯಲ್ಲಿ 45 ಲಕ್ಷ ವೆಚ್ಚದಲ್ಲಿ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಆರಂಭಿಸಲಾಗುವುದು. ಸುರತ್ಕಲ್, ಬೆಂಗ್ರೆ, ಜೆಪ್ಪು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತಲಾ 10 ಲಕ್ಷ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುವುದು. ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು, ನರ್ಸ್ಗಳು, ಫಾರ್ಮಾಸಿಸ್ಟ್ ಮತ್ತು ಡಿ ದರ್ಜೆ ನೌಕರ ನೇಮಕ ನಡೆಯಲಿದೆ. ಬೆಳಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆ ವರೆಗೆ ಕಾರ್ಯಾಚರಿಸಲಿದೆ.
ಉಳ್ಳಾಲ ಪ್ರಾಥಮಿಕ ಆರೋಗ್ಯ ಕೇಂದ್ರ ಕಿತ್ತು ಹಾಕಿ ಅಲ್ಲಿ 30 ಹಾಸಿಗೆ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ನಿರ್ಮಿಸಲಾಗುವುದು ಎಂದರು. ಎಲ್ಲ ನಾಗರಿಕರ ಆರೋಗ್ಯ ವಿವರ ಸಂಗ್ರಹಿಸಲಾಗುವುದು.
ಎಲ್ಲ ದಾಖಲೆ ಗಣಕೀಕರಣ ಮಾಡಲಾಗುವುದು. ಇದರಿಂದ ಪರಿಣಾಮಕಾರಿ ಮದ್ದು ನೀಡಲು ಸಾಧ್ಯ ಎಂದರು.
ಗ್ರಾಮಾಂತರದಲ್ಲಿರುವ ಆಶಾ ಕಾರ್ಯಕರ್ತೆಯರ ಸೇವೆಯನ್ನು ನಗರದಲ್ಲಿಯೂ ಆರಂಭಿಸಲಾಗುವುದು. ಅವರಿಗೆ ವೇತನ ಜತೆ ಆಕರ್ಷಕ ಭತ್ಯೆ ನೀಡಲಾಗುವುದು ಎಂದರು. ನವೆಂಬರ್ ವರೆಗಿನ ಬಾಕಿ ವೇತನವನ್ನು ಮೇ 10ರ ಒಳಗೆ ಪಾವತಿಸಲಾಗುವುದು ಎಂದರು.
ಟೋಲ್ಪ್ಲಾಝಾ ದಾಂದಲೆ ಖಂಡನೀಯ
ಟೋಲ್ಗೇಟ್ ದಾಂಧಲೆಯನ್ನು ಖಂಡಿಸಿದ ಖಾದರ್, ಯಾರೂ ಕಾನೂನು ಕೈಗೆತ್ತಿಕೊಳ್ಳುವುದು ಸರಿ ಅಲ್ಲ. ಅಲ್ಲಿ ನಿತ್ಯ ಪ್ರತಿಭಟನೆ, ಗಲಾಟೆಗಳಾಗುತ್ತವೆ, ಅದೇ ದಿನ ನಾನು ಅಕಸ್ಮಾತ್ ಆಗಿ ಆ ದಾರಿಯಲ್ಲಿ ಬಂದೆ, ನನಗೆ ಗಲಾಟೆ ನಡೆಯುವ ಕುರಿತು ಗೊತ್ತೇ ಇರಲಿಲ್ಲ. ಪ್ರತಿ ಪಕ್ಷಗಳು ವಿರೋಧಿಸಲೆಂದೇ ಟೀಕಿಸುತ್ತಿದ್ದಾರೆ. ಅವರಿಗೆ ರಾಜೀನಾಮೆ ಕೇಳುವ ನೈತಿಕತೆ ಇಲ್ಲ, ಬಿಜೆಪಿ ಸಚಿವರೇ ಹಿಂದೆ ಕೆಟ್ಟ ಕಾರಣಗಳಿಗಾಗಿ ರಾಜೀನಾಮೆ ನೀಡಿದ್ದಾರೆ ಎಂದು ಟೀಕಿಸಿದರು. ಎಂಡೋ ಪೀಡಿತರು ಮೃತಪಟ್ಟರೆ 5 ಲಕ್ಷ ಪರಿಹಾರ ನೀಡಲಾಗುವುದು ಎಂಬ ಜಿಲ್ಲಾಧಿಕಾರಿ ಪ್ರಕಟಣೆ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಸಚಿವ ಖಾದರ್, ಇದಕ್ಕೆ ಮುನ್ನ ಆರೋಗ್ಯ ಸಚಿವರ ಬಳಿ ಚರ್ಚಿಸಬೇಕಿತ್ತು ಎಂದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಟಿ.ಕೆ. ಸುಧೀರ್ ಇದ್ದರು.