ಕೆಜೆಪಿ ಎಲ್ಲರೂ ಬಿಜೆಪಿ ಸೇರಿಲ್ಲ: ಹಮೀದ್
ಮಂಗಳೂರು: ಕೆಜೆಪಿ ಪಕ್ಷದ ಎಲ್ಲ ಪದಾಧಿಕಾರಿಗಳು, ಸದಸ್ಯರು ಬಿಜೆಪಿ ಸೇರಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೆಜೆಪಿ ಅಲ್ಪಸಂಖ್ಯಾತ ವಿಭಾಗ ಅಧ್ಯಕ್ಷ ಹಮೀದ್ ಕುದ್ರೋಳಿ ಹೇಳಿದರು.
ಜಾತ್ಯತೀತ ನಿಲುವಿನ ಯಾವುದೇ ಮುಖಂಡ ಬಿಜೆಪಿ ಸೇರಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಮಾಡಿದ ಜನೋಪಯೋಗಿ ಕೆಲಸಗಳಿಂದ ಮತ್ತು ಬಿಎಸ್ವೈ ಆ ಸಂದರ್ಭ ತಳೆದ ಜಾತ್ಯತೀತ ನಿಲುವಿನಿಂದ ಕೆಜೆಪಿ ಸೇರಿದ್ದೆವು. ಕೋಮುವಾದಿ ನಿಲುವಿನ ಬಿಜೆಪಿ ಜತೆ ಗುರುತಿಸಲು ನಾವು ಇಷ್ಟ ಪಡುವುದಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಯಡಿಯೂರಪ್ಪ ತಮ್ಮ ಮಗ ರಾಘವೇಂದ್ರ ಹಾಗೂ ಶೋಭಾ ಕರಂದ್ಲಾಜೆಯ ರಾಜಕೀಯ ಭವಿಷ್ಯಕ್ಕೆ ಬಿಜೆಪಿ ಸೇರಿದರು. ಈ ಸಂದರ್ಭ ಅವರು ಜಿಲ್ಲಾ ಸಮಿತಿ ಅಭಿಪ್ರಾಯ ಪಡೆದುಕೊಂಡಿಲ್ಲ ಎಂದರು. ನಾವು ತಳಮಟ್ಟದ ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ತಿಳಿಸುತ್ತೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಕೆಜೆಪಿ ಬಂಟ್ವಾಳ ತಾಲೂಕು ಅಧ್ಯಕ್ಷ ಇಬ್ರಾಹಿಂ ಕೈಲಾರ್, ಮುಖಂಡರಾದ ಮಹಮ್ಮದ್ ಅಲಿ, ಇಲ್ಯಾಸ್ ನಂದಾವರ ಇದ್ದರು.