ಸ್ವಾತಂತ್ರ್ಯ ಹೋರಾಟಗಾರ ಯು.ಬಿ. ರಾಮ ರಾವ್ ಇನ್ನಿಲ್ಲ
ಉಡುಪಿ: ಸ್ವಾತಂತ್ರ್ಯ ಹೋರಾಟದ ಜೀವಂತ ಸಾಕ್ಷಿಗಳಾಗಿ, ಇಂದಿನ ಪೀಳಿಗೆಗೆ ಸ್ಫೂರ್ತಿಯಾಗಿದ್ದವರೆಲ್ಲರೂ ಒಬ್ಬೊಬ್ಬರಾಗಿ ಕಣ್ಮರೆಯಾಗುತ್ತಿದ್ದಾರೆ. ಅಂಥವರ ಸಾಲಿಗೆ ಈಗ ಉಡುಪಿಯ ಯು.ಬಿ. ರಾಮ ರಾವ್ ಸೇರಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ರಾಮ ರಾವ್ (91) ಗುಂಡಿಬೈಲಿನ ತಮ್ಮ ಸ್ವಗೃಹದಲ್ಲಿ ಸೋಮವಾರ ಮುಂಜಾನೆ 3.15ಕ್ಕೆ ನಿಧನರಾದರು. ಅವರು 7 ಗಂಡು ಮಕ್ಕಳು, ಓರ್ವ ಪುತ್ರಿ, ಅಪಾರ ಬಂಧುಗಳನ್ನು ಅಗಲಿದ್ದಾರೆ. ಉಡುಪಿಯ ಬಡಕ್ಕಿಲ್ಲಾಯ ಮನೆತನಕ್ಕೆ ಸೇರಿದ ರಾಮ ರಾಯರು ಉಡುಪಿ ಬೋರ್ಡ್ ಹೈಸ್ಕೂಲ್ ಮತ್ತು ಮಂಗಳೂರಿನ ಸೈಂಟ್ ಎಲೋಶಿಯಸ್ ಕಾಲೇಜುಗಳಲ್ಲಿ ಶಿಕ್ಷಣ ಪಡೆದರು. ತಮ್ಮ ತಾಯಿಯ ಊರಾದ ಮೂಲ್ಕಿಯಲ್ಲಿ ಕೃಷಿ ನಡೆಸಿದವರು, ಕೊನೆಯವರೆಗೂ ಕೃಷಿ ಕಾಯಕ ಬಿಟ್ಟಿರಲಿಲ್ಲ.
ಸ್ವಾತಂತ್ರ್ಯ ಹೋರಾಟ: 1942ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಯುವಜನತೆ ಭಾಗವಹಿಸುವಂತೆ ಮಂಗಳೂರಿನಲ್ಲಿ ಗಾಂಧೀಜಿ ಕರೆ ನೀಡಿದಾಗ ಎಲ್ಲವನ್ನೂ ಬಿಟ್ಟು ಚಳುವಳಿಗೆ ಧುಮುಕಿದವರಲ್ಲಿ ರಾಮರಾಯರೂ ಒಬ್ಬರು. ಅದಕ್ಕಾಗಿ ಬಂಧಿತರಾಗಿ 6 ತಿಂಗಳ ಕಠಿಣ ಜೈಲು ಶಿಕ್ಷೆ ಅನುಭವಿಸಿದ್ದರು. ಜೈಲು ವಾಸದ ವೇಳೆ ಜೈಲಧಿಕಾರಿಯ ಉದ್ಧಟತನಕ್ಕೆ ಉತ್ತರ ನೀಡಿದ್ದಕ್ಕೆ ತಲೆಗೆ ಏಟು ತಿಂದು ಉಂಟಾದ ಗಾಯದ ಕಲೆ ಶಾಶ್ವತವಾಗಿ ಉಳಿದಿತ್ತು. ಅವರ ಹೋರಾಟ, ದೇಶಪ್ರೇಮಕ್ಕೆ ಸರ್ಕಾರ ತಾಮ್ರ ಪತ್ರ ಪ್ರಶಸ್ತಿ ನೀಡಿತ್ತು. ಪೇಜಾವರ ಮಠದ ವಿಶ್ವೇಶ ತೀರ್ಥರು ತಮ್ಮ 80ನೇ ವರ್ಥಂತಿ ಉತ್ಸವದಲ್ಲಿ ರಾಮರಾಯನ್ನು ಗೌರವಿಸಿದ್ದರು. ನೂರಾರು ಸಂಘ ಸಂಸ್ಥೆಗಳು ಅವರನ್ನು ಗೌರವಿಸಿದ್ದವು.
ಮೃತರ ಅಂತ್ಯಕ್ರಿಯೆಯನ್ನು ಮೂಲ್ಕಿಯ ಅವರ ಕೃಷಿ ಭೂಮಿಯಲ್ಲೇ ನಡೆಸಲಾಯಿತು. ಪೇಜಾವರ ಶ್ರೀಗಳು, ಮಾಜಿ ಶಾಸಕ ಕೆ. ರಘುಪತಿ ಭಟ್, ಬಿಜೆಪಿ ನಾಯಕ ಎಂ. ಸೋಮಶೇಖರ ಭಟ್, ಉಪೇಂದ್ರ ಪೈ ಕಾಲೇಜಿನ ಪ್ರಾಚಾರ್ಯ ಪ್ರೊ. ಮಧುಸೂದನ ಭಟ್, ಹಿಂದೂ ಯುವಸೇನೆ ಜಿಲ್ಲಾಧ್ಯಕ್ಷ ವಾಸುದೇವ ಭಟ್, ಯುವ ಮುಂದಾಳು ಯಶ್ಪಾಲ್ ಸುವರ್ಣ, ಕರಂಬಳ್ಳಿ ಬ್ರಾಹ್ಮಣ ಸಮಿತಿ, ಕರಂಬಳ್ಳಿ ಫ್ರೆಂಡ್ಸ್, ಸಂಸ್ಕಾರ ಭಾರತಿ, ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಸೇರಿದಂತೆ ಅನೇಕರು ರಾಮರಾಯರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.