ನೋಂದಣಿ ಕಚೇರಿಯಲ್ಲಿ ಕೆಲಸ ಸ್ಥಗಿತ: ನಾಗರಿಕರ ಆಕ್ರೋಶ
ಕಾರ್ಕಳ: ತಾಲೂಕು ಉಪನೋಂದಾವಣಾ ಕಚೇರಿಯಲ್ಲಿ ಗುರುವಾರ ಸರ್ಕಾರಿ ಕಾರ್ಯಗಳು ಸ್ಥಗಿತಗೊಂಡ ಕುರಿತು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂರು ದಿನಗಳಿಂದ ಕಚೇರಿ ಕಂಪ್ಯೂಟರ್ನಲ್ಲಿ ಉಂಟಾದ ದೋಷವೇ ಇದಕ್ಕೆ ಕಾರಣ ಎನ್ನಲಾಗಿದೆ. ನೋಂದಾವಣಾಧಿಕಾರಿ ಹಾರಿಕೆ ಉತ್ತರ ನೀಡುತ್ತಿದ್ದುದರಿಂದ ಅರ್ಜಿದಾರರಿಂದ ಆಕ್ರೋಶ ಇನ್ನಷ್ಟು ಹೆಚ್ಚಳವಾಗಲು ಕಾರಣವಾಯಿತು ಎನ್ನಲಾಗಿದೆ. ಮಾಧ್ಯಮ ಪ್ರತಿನಿಧಿಗಳು ಸ್ಥಳಕ್ಕೆ ತೆರಳಿ ಉಪನೋಂದಾವಣಾಧಿಕಾರಿಯನ್ನು ಸಂಪರ್ಕಿಸಲು ಮುಂದಾದರೂ ಸಮಸ್ಯೆಗೆ ಸ್ಪಷ್ಟ ಉತ್ತರ ಸಿಗಲಿಲ್ಲ. ಜಿಲ್ಲಾ ನೋಂದಾವಣಾಧಿಕಾರಿಯನ್ನು ಸಂಪರ್ಕಿಸಿದಾಗ ಕಂಪ್ಯೂಟರ್ ಟೆಕ್ನಿಶಿಯನ್ನ್ನು ಕಳುಹಿಸಿ ಕೊಡುವ ಭರವಸೆ ನೀಡಿದರು. ಈ ನಡುವೆ ಟೆಕ್ನಿಶಿಯನ್ನ ಬೇಜವಾಬ್ದಾರಿ ಉತ್ತರದ ವಿರುದ್ಧ ತಹಸೀಲ್ದಾರ್ಗೆ ಮಾಧ್ಯಮ ಪ್ರತಿನಿಧಿಗಳು ದೂರು ಸಲ್ಲಿಸಿದರು. ಪರಿಸ್ಥಿತಿ ಅರ್ಥೈಸಿಕೊಂಡ ತಹಸೀಲ್ದಾರ್ ಉಪನೋಂದಾವಣಾ ಕಚೇರಿಗೆ ಭೇಟಿಯಾಗಿ ಸಮಸ್ಯೆ ಆಲಿಸಿದರು. ಬೇಜವಾಬ್ದಾರಿ ರೀತಿಯಲ್ಲಿ ವರ್ತಿಸುವ ಸಿಬ್ಬಂದಿಗೆ ಸೂಚನೆ ನೀಡಿದರು. ಈ ಎಲ್ಲ ಬೆಳವಣಿಗೆಗಳ ನಡುವೆ, ಕಂಪ್ಯೂಟರ್ ಟೆಕ್ನಿಶಿಯನ್ ಅಗಮಿಸುವ ಮೊದಲೇ ಕಂಪ್ಯೂಟರ್ ಸುಸ್ಥಿತಿಯಲ್ಲಿ ಕಾರ್ಯ ನಿರ್ವಹಿಸಿ ಕೆಲಸ ಕಾರ್ಯಗಳು ಯಥಾಸ್ಥಿತಿಯಲ್ಲಿ ಮುಂದುವರಿದಿತ್ತು!