ಕಾಂಗ್ರೆಸ್ ಪ್ರೈಮರೀಸ್ ಚುನಾವಣೆ, ಚಲಾವಣೆ ಇಲ್ಲದವರಿಗೆ ಮಣೆ!
ಜಿತೇಂದ್ರ ಕುಂದೇಶ್ವರ
ಮಂಗಳೂರು: 'ಕಾಂಗ್ರೆಸ್ ಪ್ರೈಮರೀಸ್' ಚುನಾವಣೆಯಲ್ಲಿ ತಳಮಟ್ಟದ ಕಾರ್ಯಕರ್ತರು ಮೂಲೆಗುಂಪು, ಚಲಾವಣೆ ಇಲ್ಲದ ಮಾಜಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮಣೆ.
ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗೆ ನಡೆಯುವ 'ಕಾಂಗ್ರೆಸ್ ಪ್ರೈಮರೀಸ್' ಚುನಾವಣೆ ಕುರಿತು ಪಕ್ಷದ ನಿಜವಾದ ಕಾರ್ಯಕರ್ತರಲ್ಲಿ ಗೊಂದಲ ಮತ್ತು ಅಸಮಾಧಾನ ಒಟ್ಟೊಟ್ಟಿಗೆ ಮೂಡಿದೆ.
ಆಭ್ಯರ್ಥಿ ಆಯ್ಕೆಯಾದ ಬಳಿಕ ಮನೆ ಮನೆಗೆ ತರೆಳಿ ಮತ ಯಾಚಿಸುವವ, ಸ್ಥಳೀಯ ಜನರ ನಾಡಿ ಮಿಡಿತ ಬಲ್ಲ ಬೂತ್ ಅಧ್ಯಕ್ಷರಿಗೇ, ವಲಯಾಧ್ಯಕ್ಷರಿಗೆ ಮತ ಹಕ್ಕಿಲ್ಲ! ಬ್ಲಾಕ್ ಸಮಿತಿ ಪದಾಧಿಕಾರಿಗಳು ಮತದಾನ ಅವಕಾಶದಿಂದ ವಂಚಿತರಾಗಿದ್ದಾರೆ.
ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಹಾಲಿ ಎಐಸಿಸಿ, ಕೆಪಿಸಿಸಿ ಪ್ರತಿನಿಧಿಗಳು, ರಾಷ್ಟ್ರ ಮಟ್ಟದ ಮತ್ತು ರಾಜ್ಯ ಮಟ್ಟದ ಪದಾಧಿಕಾರಿಗಳು, ಬ್ಲಾಕ್ ಆಧ್ಯಕ್ಷರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು, ಮಾಜಿ ಸಂಸದರು, ಮಾಜಿ ಶಾಸಕರು. ವಿಧಾನಪರಿಷತ್ ಮಾಜಿ ಸದಸ್ಯರು, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷರು, ಮಾಜಿ ಮೇಯರ್, ಉಪಮೇಯರ್, ನಗರ ಪಂಚಾಯ್ತಿ, ತಾಲೂಕು ಪಂಚಾಯ್ತಿ ಪುರಸಭೆ ಸದಸ್ಯರು ಕಳೆದ ಬಾರಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಸೋತವರು, ಕಳೆದ ಬಾರಿ ಕಾರ್ಪೊರೇಟರ್ ಮತ್ತು ಈ ಬಾರಿ ಕಾರ್ಪೊರೇಟರ್ಗಳು ಮತ್ತು ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿ ಸೋತವರಿಗೂ ಮತದಾನ ಹಕ್ಕು ನೀಡಲಾಗಿದೆ.
ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಜಿಲ್ಲಾ ಮಟ್ಟದ ವೈದ್ಯಕೀಯ ಸಂಘದ ಅಧ್ಯಕ್ಷರು, ದಂತವೈದ್ಯರ ಸಂಘ, ಜಿಲ್ಲಾ ವಕೀಲ ಸಂಘ, ಜಿಲ್ಲಾ ಮಟ್ಟದ ಎಂಜಿನಿಯರ್ ಸಂಘ, ಚೇಂಬರ್ ಆಫ್ ಕಾಮರ್ಸ್ ಲೆಕ್ಕ ಪರಿಶೋಧಕರ ಸಂಘ ಅಧ್ಯಕ್ಷರು, ಜಿಲ್ಲಾ ಮಟ್ಟದ ಸಹಕಾರಿ ಸಂಘದ ಅಧ್ಯಕ್ಷರು, ನಿರ್ದೇಶಕರಿಗೆ ಮತ ಇದೆ. ಇಲ್ಲಿ ಅವರು ಬಿಜೆಪಿ ಬೆಂಬಲಿಗರೋ, ಕಾಂಗ್ರೆಸ್ ಬೆಂಬಲಿಗರೊ ಎಂದು ಹುಡುಕಿ ಮತದಾನ ಹಕ್ಕು ನೀಡುವ ಕೆಲಸ ಕಾಂಗ್ರೆಸ್ ಪಕ್ಷ ಮಾಡಬೇಕಿದೆ. ಇದು ಗೊಂದಲಕ್ಕೆ ಕಾರಣವಾಗಿದೆ.
ಮಾಜಿ ಶಾಸಕ ಸುಂಠಿಕೊಪ್ಪ ಇಬ್ರಾಹಿಂ ಜೆಡಿಎಸ್ ಸೇರಿ ಸ್ಪರ್ಧಿಸಿದ್ದರು. ಬಳಿಕ ಕಾಂಗ್ರೆಸ್ ಸೇರಿದ್ದರೂ ಸಕ್ರಿಯವಾಗಿಲ್ಲ, ಅಂಥವರಿಗೂ ಮತ ಹಕ್ಕಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ಮಾಜಿ ಕಾರ್ಪೊರೇಟರ್ಗಳಿಗೆ ಮತದಾನ ಹಕ್ಕು ಇದೆಯೊ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.
'ಒಮ್ಮೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾದರೆ, ಮೇಯರ್ ಆದರೆ ಬಳಿಕ ಹೆಚ್ಚಿನವರ ರಾಜಕೀಯ ಬದುಕು ಚಲನಶೀಲವಾಗಿರುವುದಿಲ್ಲ, ರಾಜಕೀಯದಲ್ಲಿ ಸಕ್ರಿಯರಾಗಿರುವುದಿಲ್ಲ.
ಹೀಗಾಗಿ ಸರಿಯಾದ ಜನರ ಅಭಿಪ್ರಾಯದ ಫೀಡ್ಬ್ಯಾಕ್ ತಿಳಿಯುವುದು ಕಷ್ಟ, ಕಾರ್ಯಕರ್ತರಿಗೆ ಹಕ್ಕು ನೀಡದೆ, ಸೊಸೈಟಿ ನಿರ್ದೇಶಕರಿಗೆಲ್ಲ ಮತದಾನ ಹಕ್ಕು ನೀಡಿರುವುದು ಸರಿ ಅಲ್ಲ' ಎನ್ನುವುದು ಕಾಂಗ್ರೆಸ್ ಕಾರ್ಯಕರ್ತರ ನೋವು.
'ದಕ್ಷಿಣ ಕನ್ನಡ ಲೋಕಸಭೆ ಚುನಾವಣೆಯಲ್ಲಿ 1,500 ರಿಂದ 2 ಸಾವಿರ ಮತಗಳು ಇರಬಹುದು. ಮಂಗಳೂರಲ್ಲಿ ಫೆಬ್ರವರಿ ಮೂರನೇ ವಾರದಲ್ಲಿ ಚುನಾವಣೆ ಸಾಧ್ಯತೆ ಇದೆ' ಎಂದು ಟಿಕೆಟ್ ಆಕಾಂಕ್ಷಿ ಬಿ. ಜನಾರ್ದನ ಪೂಜಾರಿ ತಿಳಿಸಿದ್ದಾರೆ.
ಪೂಜಾರಿ, ಹರ್ಷ ಸ್ಪರ್ಧೆ: ಟೆಕೆಟ್ ಆಕಾಂಕ್ಷಿಗಳು ಮತದಾರ ನೋಂದಣಿಯಲ್ಲಿ ಆಸಕ್ತಿ ವಹಿಸುತ್ತಿದ್ದಾರೆ. ಈ ಸ್ಪರ್ಧೆಯಲ್ಲಿ ಟಿಕೆಟ್ ಆಕಾಂಕ್ಷಿ ಹರ್ಷ ಮೊಯ್ಲಿ ಮತ್ತು ಹಿರಿಯ ಮುಖಂಡ ಜನಾರ್ದನ ಪೂಜಾರಿ ಮುಂಚೂಣಿಯಲ್ಲಿದ್ದಾರೆ.
ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುತ್ತಿದ್ದಾರೆ. ನಾನೂ ಟಿಕೆಟ್ ಆಕಾಂಕ್ಷಿ ಎಂದು ಹೇಳಿದ್ದ ಕಣಚೂರು ಮೋಣು ಮತದಾರ ಪಟ್ಟಿ ಮಾಡುವಲ್ಲಿ ಆಸಕ್ತಿ ವಹಿಸಿಲ್ಲ. ಎಐಸಿಸಿ ಪ್ರತಿನಿಧಿಗಳು ಆಗಮಿಸಿ ಮತಪಟ್ಟಿ ಪರಿಷ್ಕರಿಸಿ, ಚುನಾವಣೆ ನಡೆಸಲಿದ್ದಾರೆ.
ಪ್ರಾಶಸ್ತ್ಯ ಮತ: ಮತದಾರರು ಮೊದಲ ಪ್ರಾಶಸ್ತ್ಯ ಮತ, ಎರಡನೇ ಪ್ರಾಶಸ್ತ್ಯ ಮತ ಹಾಕಬಹುದು. ಮೊದಲ ಪ್ರಾಶಸ್ತ್ಯ ಮತಗಳು ಶೇ.50ಕ್ಕಿಂತ ಹೆಚ್ಚು ಬಂದರೆ ಅವರು ಗೆದ್ದಂತೆಯೇ. ಅವರಿಗೆ ಲೋಕಸಭೆ ಕ್ಷೇತ್ರ ಟಿಕೆಟ್ ಲಭಿಸಲಿದೆ. ಶೇ.50ಕ್ಕಿಂತ ಕಡಿಮೆ ಬಂದರೆ, ಎರಡನೇ ಪ್ರಾಶಸ್ತ್ಯ ಮತ ಲೆಕ್ಕ ಹಾಕಲಾಗುವುದು.
ಮತದಾನಕ್ಕೆ ಮುನ್ನ 1 ಗಂಟೆ ಅಭ್ಯರ್ಥಿಗಳ ಸುದೀರ್ಘ ಭಾಷಣ ಇರುತ್ತದೆ. ಈ ಸಂದರ್ಭದಲ್ಲಿ ಮನ ಪರಿವರ್ತನೆ ಭಾಷಣ ಮಾಡಿ ಹೆಚ್ಚಿನ ಮತಗಳನ್ನು ಪಡೆಯುವ ಅವಕಾಶ ಕಲ್ಪಿಸಲಾಗಿದೆ.