ಪೆರ್ವಾಜೆ: ನಾಳೆಯಿಂದ ಶಿರ್ಡಿ ಸಾಯಿಬಾಬಾ ಮಂದಿರ ಪ್ರತಿಷ್ಠಾ ವರ್ಧಂತ್ಯುತ್ಸವ
ಕಾರ್ಕಳ: ಪೆರ್ವಾಜೆ ಶಾಸ್ತಾವು ರಸ್ತೆ ಸುವರ್ಣ ಭೂಮಿಯಲ್ಲಿ ನಿರ್ಮಾಣಗೊಂಡ ಶ್ರೀ ಶಿರ್ಡಿ ಸಾಯಿಬಾಬಾ ಮಂದಿರದ ಪ್ರಥಮ ಪ್ರತಿಷ್ಠಾ ವರ್ಧಂತ್ಯುತ್ಸವ ಫೆ.13ರಿಂದ 15ರವರೆಗೆ ನಡೆಯಲಿದೆ ಎಂದು ದೇವಳದ ಮೊಕ್ತೇಸರ ಪ್ರೊ.ಬಿ. ಪದ್ಮನಾಭ ಗೌಡ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಳದ ಸಂಸ್ಥಾಪಕ ಆಡಳಿತ ಮೊಕ್ತೇಸರ ಚಂದ್ರಹಾಸ ಸುವರ್ಣ ಅವರ ಪ್ರಯತ್ನದ ಫಲವಾಗಿ ಶಿರ್ಡಿ ಸಾಯಿಬಾಬಾ ಮಂದಿರ ನಿರ್ಮಾಣವಾಗಿದೆ. ಇದೀಗ ಅಲ್ಲೇ ಹತ್ತಿರದಲ್ಲಿ ಶ್ರೀನಿವಾಸ ಜಿ.ಕೆ. ಪೈ ಅವರಿಂದ ಸುಂದರವಾದ ಧ್ಯಾನ ಮಂದಿರ ನಿರ್ಮಾಣಗೊಳ್ಳುತ್ತಿದ್ದು, ಮುಂಬರುವ ನವೆಂಬರ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು.
ಫೆ.13ರಂದು ಸಂಜೆ 5.30ಕ್ಕೆ ದೇವಳದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಗರಾಭಿವೃದ್ಧಿಸಚಿವ ವಿನಯ ಕುಮಾರ್ ಸೊರಕೆ ಉದ್ಘಾಟಿಸಲಿದ್ದಾರೆ. ಶಾಸಕ ವಿ.ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ, ಪುರಸಭೆ ಅಧ್ಯಕ್ಷೆ ರೆಹಮತ್, ಸದಸ್ಯರಾದ ಸುಭಿತ್ ಎನ್.ಆರ್., ಗಿರಿಧರ್ ನಾಯಕ್, ನಾರಾಯಣ ಗುರು ಬ್ಯಾಂಕ್ ಉಪಾಧ್ಯಕ್ಷ ಸುದರ್ಶನ್ ಎಚ್., ಉದ್ಯಮಿ ಬೋಳ ಪ್ರಭಾಕರ ಕಾಮತ್, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಅವೆಲಿನ್ ಆರ್. ಲೂಯಿಸ್, ಉದ್ಯಮಿ ರಾಘವೇಂದ್ರ ಆಚಾರ್, ಬಿಜೆಪಿ ಕ್ಷೇತ್ರಾಧ್ಯಕ್ಷ ಮಣಿರಾಜ ಶೆಟ್ಟಿ, ಮುಡಾರು ಕೊಪ್ಪಲ ಮಹಾಬಲ, ಲಯನ್ ಎನ್.ಎಂ. ಹೆಗ್ಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧಾಕರ್ ಕೋಟ್ಯಾನ್, ಪೆರ್ವಾಜೆ ಮುದ್ದಣ ನಗರ ಸುಂದರ ಪೂಜಾರಿ ಉಪಸ್ಥಿತರಿರುವರು. ಅಂದು ರಾತ್ರಿ 7 ಗಂಟೆಗೆ ಅನ್ನಸಂತರ್ಪಣೆ, 9.30ರಿಂದ ಬಪ್ಪನಾಡು ಮೇಳದವರಿಂದ ಸಂಪೂರ್ಣ ಕೋಟಿ ಚೆನ್ನಯ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. 14ರಂದು ಮಧ್ಯಾಹ್ನ ಧಾರ್ಮಿಕ ಸಭೆ ನಡೆಯಲಿದ್ದು, ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ಹಾಗೂ ಸಂಜೆ 6 ಗಂಟೆಗೆ ಕಲಾನಿಧಿ ಕಾರ್ಕಳ ಅವರಿಂದ ಭಕ್ತಿ ಸಂಗೀತ ರಸಮಂಜರಿ, 15ರಂದು ಸಂಜೆ 5 ಗಂಟೆಗೆ ಶ್ರೀ ಅನಂತಪದ್ಮನಾಭ ಭಟ್‌ರಿಂದ 'ಸಾಯಿ ಚರಿತ್ರೆ' ಹರಿಕಥೆ ನಡೆಯಲಿದೆ ಎಂದರು.
ದೇವಳದ ಸಂಸ್ಥಾಪಕ ಆಡಳಿತ ಮೊಕ್ತೇಸರ ಚಂದ್ರಹಾಸ ಸುವರ್ಣ, ಮೊಕ್ತೇಸರರಾದ ಡಾ.ಪ್ರೇಮ್‌ದಾಸ್ ಮತ್ತು ಪ್ರಕಾಶ್‌ನಾಥ್ ಇದ್ದರು.