ಅಂಬಲಪಾಡಿ: ಇಂದು ಗೌರವಧನ ವಿತರಣೆ, ಮೊಗವೀರ ಯುವ ಸಂಘಟನೆ ಪದಗ್ರಹಣ
ಉಡುಪಿ: ಅಂಬಲಪಾಡಿಯ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಮತ್ತು ಮೊಗವೀರ ಯುವ ಸಂಘಟನೆ ನೇತೃತ್ವದಲ್ಲಿ ಉಡುಪಿ ಅಂಬಲಪಾಡಿಯ ಶ್ಯಾಮಿಲಿ ಸಭಾಂಗಣದಲ್ಲಿ ಶನಿವಾರ ಬೆಳಗ್ಗೆ 10ಕ್ಕೆ ಗುರಿಕಾರರ ಸಮಾವೇಶ, ಗೌರವಧನ ವಿತರಣೆ ಹಾಗೂ ಉಡುಪಿ ಮೊಗವೀರ ಯುವ ಸಂಘಟನೆಯ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ನಡೆಯಲಿದೆ.
ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ. ಜಿ. ಶಂಕರ್ ಉದ್ಘಾಟಿಸಲಿದ್ದಾರೆ. ಉಡುಪಿ ಮೊಗವೀರ ಯುವ ಸಂಘಟನೆ ಅಧ್ಯಕ್ಷ ಸದಾನಂದ ಬಳ್ಕೂರು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಶಾಸಕ ಪ್ರಮೋದ್ ಮಧ್ವರಾಜ್, ಕಾಪು ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ ಭಾಗವಹಿಸಲಿದ್ದಾರೆ.
ದೀನದಯಾಳ್ಗೆ ನುಡಿನಮನ
ಉಡುಪಿ: ಪಂಡಿತ್ ದೀನದಯಾಳ್ ಉಪಾಧ್ಯಾಯರ ವಿಚಾರ ಧಾರೆಗಳು ರಾಜಕೀಯರಂಗದಲ್ಲಿ ತೊಡಗಿಸಿಕೊಳ್ಳುವ ಯುವಕರಿಗೆ ಸ್ಫೂರ್ತಿಯಾಗಿವೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಸಹವಕ್ತಾರ ಶ್ರೀಕಾಂತ್ ಶೆಟ್ಟಿ ಅಭಿಪ್ರಾಯಪಟ್ಟರು.
ಪಂಡಿತ್ ದೀನದಯಾಳರ ಬಲಿದಾನ ದಿನವಾದ ಫೆ. 11ರಂದು ಅವರಿಗೆ ನುಡಿನಮನ ಸಲ್ಲಿಸಿ ಮಾತನಾಡಿದ ಅವರು, ಒಂದೆಡೆ ಸಮಾಜವಾದ, ಇನ್ನೊಂದೆಡೆ ಮಾರ್ಕ್ಸ್ ವಾದ ಪ್ರಭಾವದ ನಡುವೆಯೂ ಸಮಾಜದ ಎಲ್ಲಾ ವರ್ಗದವರೂ ಒಪ್ಪುವ ಏಕಾತ್ಮತಾ ಮಾನವತಾ ವಾದವನ್ನು ಜಗತ್ತಿಗೆ ನೀಡಿದವರು ಎಂದು ಹೇಳಿದರು.
ಪಂಡಿತ್ ದೀನದಯಾಳ್ ತಮ್ಮ ಅದ್ಭುತ ಚಿಂತನೆಗಳಿಂದ ಎಲ್ಲರಿಗೂ ಆದರ್ಶಪ್ರಾಯರು ಎಂದರು.
ಸಭೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಮಾಜಿ ಅಧ್ಯಕ್ಷ ಕೆ. ಉದಯ ಕುಮಾರ್ ಶೆಟ್ಟಿ, ಪಕ್ಷದ ನಾಯಕರಾದ ಎಂ. ಸೋಮಶೇಖರ್ ಭಟ್, ಶ್ಯಾಮಲಾ ಎಸ್. ಕುಂದರ್, ಕುತ್ಯಾರು ನವೀನ್ ಶೆಟ್ಟಿ, ಸಂಧಾ ರಮೇಶ್, ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ, ಸಲೀಂ ಅಂಬಾಗಿಲು, ಉಪೇಂದ್ರ ನಾಯಕ್, ಜೀವನ ಕುಮಾರ್ ಶೆಟ್ಟಿ, ಶಶಾಂಕ್ ಶಿವತ್ತಾಯ ಇದ್ದರು.
ತ್ರಾಸಿ ಕಡಲ ತೀರದಲ್ಲಿ 'ನಮೋ ಟೀ'
ಗಂಗೊಳ್ಳಿ: ಬಿಜೆಪಿಯ ತ್ರಾಸಿ ಶಕ್ತಿ ಕೇಂದ್ರ ಮತ್ತು ನಮೋ ಫ್ರೆಂಡ್ಸ್ ವತಿಯಿಂದ ನಮೋ ಟೀ ಕಾರ್ಯಕ್ರಮ ತ್ರಾಸಿಯ ಬೀಚ್ನಲ್ಲಿ ಜರುಗಿತು.
ಬೈಂದೂರು ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಮಾತನಾಡಿದರು. ತ್ರಾಸಿ ಬಿಜೆಪಿ ಶಕ್ತಿಕೇಂದ್ರ ಅಧ್ಯಕ್ಷ ಹರೀಶ ಮೇಸ್ತ, ತ್ರಾಸಿ ಸ್ಥಾನೀಯ ಸಮಿತಿ ಅಧ್ಯಕ್ಷ ರಾಮದಾಸ ಖಾರ್ವಿ, ಬೈಂದೂರು ಕ್ಷೇತ್ರ ಎಸ್.ಸಿ ಮೋರ್ಚಾ ಅಧ್ಯಕ್ಷ ಪ್ರಭಾಕರ ಮೊವಾಡಿ ಸಹಿತ ಹಲವು ಪ್ರಮುಖರು ಇದ್ದರು.
ಕೊಲ್ಲೂರು: ಜಾನಪದ ಲೋಕಯಾತ್ರೆ ಸಂಪನ್ನ
ಕಾರ್ಕಳ: ಸೌತ್ ಸೆಂಟ್ರಲ್ ಝೋನ್ ಕಲ್ಚರಲ್ ಸೆಂಟರ್ ನಾಗಪುರ, ಕನ್ನಡ ಸಂಸ್ಕೃತಿ ಇಲಾಖೆ ಉಡುಪಿ ಆಶ್ರಯದಲ್ಲಿ ಇಲ್ಲಿನ ಶ್ರೀ ಮಹಾಗಣಪತಿ ಆರ್ಟ್ ಮತ್ತು ಕಲ್ಚರಲ್ ಫೌಂಡೇಶನ್ ವತಿಯಿಂದ ನಡೆದ ಜಾನಪದ ಲೋಕಯಾತ್ರೆ- 2014 ಶ್ರೀಕ್ಷೇತ್ರ ಕೊಲ್ಲೂರಿನಲ್ಲಿ ಸಮಾಪನಗೊಂಡಿತು.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಾದ ನಂದಳಿಕೆ, ಬೈಂದೂರು, ನಿಟ್ಟೆ, ಕಮಲಶಿಲೆ, ಕೊಲ್ಲೂರಿನಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶದ ಬುಡಕಟ್ಟು ಜನಾಂಗದ ಕಲಾವಿದರಿಂದ ವಿವಿಧ ರೀತಿಯ ನೃತ್ಯ ವೈವಿಧ್ಯಮಯ ಕಾರ್ಯಕ್ರಮಗಳು ನಡೆದು ಜನರ ಪ್ರಶಂಸೆಗೆ ಪಾತ್ರವಾಯಿತು.
ಕೋಟ ಶ್ರೀನಿವಾಸ ಪೂಜಾರಿ ಆಯ್ಕೆ
ಉಡುಪಿ: ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾಗಿ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಆಯ್ಕೆಯಾಗಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಅವರ ಸೂಚನೆ ಮೇರೆಗೆ ಬಿಜೆಪಿ ಹಿರಿಯ ಮುಖಂಡ ಈಶ್ವರಪ್ಪ ಅವರು ತುಮಕೂರಿನಲ್ಲಿ ನಡೆದ ಸ್ವಾಭಿಮಾನಿ ಸಮಾವೇಶದ ಪೂರ್ವಸಿದ್ಧತಾ ಸಭೆಯಲ್ಲಿ ಅಧಿಕೃತವಾಗಿ ಈ ಘೋಷಣೆಯನ್ನು ಪ್ರಕಟಿಸಿರುತ್ತಾರೆ ಎಂದು ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ. ಕೋಟ ಶ್ರೀನಿವಾಸ ಪೂಜಾರಿ ಅವರು ಈ ಹಿಂದೆ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷತೆ ಸೇರಿದಂತೆ ಪಕ್ಷದ ಹಲವಾರು ಹುದ್ದೆಗಳನ್ನು ನಿರ್ವಹಿಸಿದ್ದರು. ಈ ಮಧ್ಯೆ ರಾಜ್ಯ ಬಿಜೆಪಿ ಸಹವಕ್ತಾರರಾಗಿ ಪಾರ್ಟಿಯು ಅವರನ್ನು ನಿಯೋಜಿಸಿತ್ತು. ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಉಡುಪಿ ಜಿಲ್ಲಾ ಬಿಜೆಪಿ ಅಭಿನಂದಿಸಿದೆ.
ಮಿಯ್ಯಾರು: ಮೋದಿ ಸಮಾವೇಶಕ್ಕೆ 2 ಸಾವಿರ ಮಂದಿ
ಕಾರ್ಕಳ: ಮಂಗಳೂರಿನಲ್ಲಿ 18ರಂದು 'ಭಾರತ ಗೆಲ್ಲಿಸಿ' ಧ್ಯೇಯ ವಾಕ್ಯದೊಂದಿಗೆ ನಡೆಯಲಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪಾಲ್ಗೊಳ್ಳುವ ಬೃಹತ್ ಸಮಾವೇಶಕ್ಕೆ ಮಿಯ್ಯಾರು ಬೆಜೆಪಿ ಶಕ್ತಿಕೇಂದ್ರ ವ್ಯಾಪ್ತಿಯಿಂದ 2 ಸಾವಿರ ಜನ ಪಾಲ್ಗೊಳ್ಳಲಿದ್ದಾರೆ.
ಮಿಯ್ಯಾರು ಶಕ್ತಿಕೇಂದ್ರ ವ್ಯಾಪ್ತಿಯಲ್ಲಿ 32 ಬೂತ್ಗಳಿದ್ದು, ಪ್ರತಿ ಬೂತ್ಗಳಿಂದ 50 -100 ಜನ ಪಾಲ್ಗೊಳ್ಳಲಿದ್ದಾರೆ.
ಸುಮಾರು 20-30 ವಾಹನಗಳಲ್ಲಿ ಕಾರ್ಯಕರ್ತರು ತೆರಳಲಿದ್ದಾರೆ ಎಂದು ಮಿಯ್ಯಾರು ಬಿಜೆಪಿ ಶಕ್ತಿಕೇಂದ್ರ ಅಧ್ಯಕ್ಷ ಉದಯ ಎಸ್. ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ರಮೇಶ ಹೆಗ್ಡೆ ಮಿಯ್ಯಾರು ಪ್ರಕಟಣೆ ತಿಳಿಸಿದೆ.