ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಜಿಲ್ಲೆಯ 313 ಮಂದಿಗೆ ಹಕ್ಕುಪತ್ರ ವಿತರಣೆ ಬಾಕಿ: ಯೋಗೇಶ್ವರ್

Mainashree
Updated On : 18 Feb 2014, 11:35 am

ಮಣಿಪಾಲ:  ಜಿಲ್ಲೆಯಲ್ಲಿ 822 ನಿವೇಶನ ರಹಿತ ಅರ್ಜಿದಾರರ ಪೈಕಿ 2013ರ ಆಗಸ್ಟ್‌ನಿಂದ ಈವರೆಗೆ 509 ಮಂದಿಗೆ ನಿವೇಶನ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. 313 ಜನರಿಗೆ ಹಕ್ಕು ಪತ್ರ ವಿತರಿಸಲು ಬಾಕಿ ಇದೆ ಎಂದು ಕುಂದಾಪುರ ಸಹಾಯಕ ಆಯುಕ್ತ ಯೋಗೇಶ್ವರ್ ತಿಳಿಸಿದರು.
ಇತ್ತೀಚೆಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ನಿವೇಶನರಹಿತರಿಗೆ ವಿತರಣೆಗೆ ಒಟ್ಟು 850,86 ಎಕ್ರೆ ಭೂಮಿ ಗುರುತಿಸಲಾಗಿದ್ದು, ಉಡುಪಿ ತಾಲೂಕಿನ ಬೈರಂಪಳ್ಳಿ ಮತ್ತು ಕಾರ್ಕಳ ತಾಲೂಕಿನ ಮುಂಡ್ಕೂರಿನಲ್ಲಿ ನಿವೇಶನ ಕಾದಿರಿಸಲು ಹೊಸ ಪ್ರಸ್ತಾಪ ಸಲ್ಲಿಸಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಅಧ್ಯಕ್ಷ ಉಪೇಂದ್ರ ನಾಯಕ್, ಕಂದಾಯ ಮತ್ತು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಅರಣ್ಯ ಇಲಾಖೆಯವರು ಸಂಯುಕ್ತವಾಗಿ ಹಾಗೂ ತುರ್ತಾಗಿ ನಿವೇಶನಕ್ಕೆ ಜಾಗ ಗುರುತಿಸಿ, ಹಂಚುವ ಕೆಲಸವಾಗಬೇಕು. ಜಿಲ್ಲೆಯಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯಡಿ ತಾಂತ್ರಿಕ ಕಾರಣಗಳಿಂದ 6,000 ಮನೆ ನಿರ್ಮಾಣ ತಡೆಗೊಳಿಸಿರುವುದನ್ನು ತೆರವುಗೊಳಿಸಿದ್ದು, ಈ ಮನೆಗಳನ್ನು ಪೂರ್ಣಗೊಳಿಸಲು ಫೆ. 28ರವರೆಗೆ ರಾಜೀವ್ ಗಾಂಧಿ ವಸತಿ ನಿಗಮ ಕಾಲಾವಕಾಶ ಒದಗಿಸಿದೆ ಎಂದರು.
ಉದ್ಯೋಗ ಖಾತರಿ ಕಾಯಿದೆಯಡಿ ತೋಟಗಾರಿಕೆ ಇಲಾಖೆಯ ವತಿಯಿಂದ ಒಟ್ಟು 295  ಕಾಮಗಾರಿಗಳನ್ನು ಮುಗಿಸಿದ್ದು, ರು. 16.99 ಲಕ್ಷ, ಜಲಾನಯನ ಇಲಾಖೆಯಡಿ 51 ಕಾಮಗಾರಿಗಳಿಗೆ ರು. 15.22 ಲಕ್ಷ, ಸಾಮಾಜಿಕ ಅರಣ್ಯದಡಿ 23 ಕಾಮಗಾರಿಗಳಿಗೆ ರು. 12.21 ಲಕ್ಷ, ಗೇರು ನಿಗಮದಿಂದ ರು. 18.40 ಲಕ್ಷ ವೆಚ್ಚವಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದರು.
ಅನಿಲ ವಿತರಣೆ: ಜಿಲ್ಲೆಯಲ್ಲಿ ಅಡುಗೆ ಅನಿಲ ಏಜೆನ್ಸಿ ಸಮಸ್ಯೆ ಬಹಳಷ್ಟಿದ್ದು, ನಗರದ ಒಳಗಿನ ಏಜೆನ್ಸಿಯವರು ಗ್ಯಾಸ್ ಸಿಲಿಂಡರ್‌ಗಳನ್ನು ಕೇವಲ 3 ಕಿ.ಮೀ. ವ್ಯಾಪ್ತಿಯೊಳಗೆ ಮಾತ್ರ ವಿತರಣೆ ಮಾಡುತ್ತಿದ್ದಾರೆ. ಈ ಸಮಸ್ಯೆ ನಿವಾರಿಸಲು ಈಗಾಗಲೇ ಉಪನಿರ್ದೇಶಕರು ಆಹಾರ ಮತ್ತು ಪಡಿತರ ವಿತರಣೆ ಅವರು ಗ್ಯಾಸ್ ಏಜೆನ್ಸಿಗಳಿಗೆ ಪತ್ರ ಬರೆದಿದ್ದಾರೆ ಎಂದು ಅಧ್ಯಕ್ಷರಿಗೆ ಸಭೆಯಲ್ಲಿ ಮಾಹಿತಿ ನೀಡಲಾಯಿತು.
ಜಿ.ಪಂ.ನ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷ ಗಣಪತಿ ಶ್ರೀಯಾನ್, ಉದಯ ಕೋಟ್ಯಾನ್, ಜಿ.ಪಂ. ಸಿಇಒ ಕನಗವಲ್ಲಿ, ಉಪಕಾರ್ಯದರ್ಶಿ ಪ್ರಾಣೇಶ್ ರಾವ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement