ಕಾಲಡಿ-ಕೇದಾರ ಅಭಿಯಾನಕ್ಕೆ ಉಡುಪಿಯಲ್ಲಿ ಸ್ವಾಗತ
ಉಡುಪಿ: ಕಳೆದ ವರ್ಷ ಜೂ. 15ರಂದು ಉತ್ತರಾಖಂಡದಲ್ಲಿ ಅತಿವೃಷ್ಟಿಯಿಂದಾಗಿ ನಾಶವಾದ ಕೇದಾರದ ಆದಿಶಂಕರಾಚಾರ್ಯರ ಸಮಾಧಿ, ಮಂದಿರಗಳನ್ನು ಪುನಃನಿರ್ಮಾಣ ಮಾಡಬೇಕು ಎಂದು ಅಲ್ಲಿನ ಸರ್ಕಾರವನ್ನು ಒತ್ತಾಯಿಸುವ ಉದ್ದೇಶದೊಂದಿಗೆ ಕೇರಳದ ಕಾಂಞಂಗಾಡಿನ ಹೊಸದುರ್ಗದ ನಿವೃತ್ತ ಕರ್ನಲ್ ಎಚ್. ಅಶೋಕ್ ಕಿಣಿ ನೇತೃತ್ವದ ತಂಡ ಕಾಲಡಿ (ಶಂಕರಾಚಾರ್ಯರ ಜನ್ಮಸ್ಥಳ)ಯಿಂದ ಕೇದಾರ ವರೆಗೆ ಅಭಿಯಾನ ಆರಂಭಿಸಿದೆ.
ಉಡುಪಿಗೆ ಶುಕ್ರವಾರ ತಲುಪಿದ ಈ ತಂಡವನ್ನು ಕೊಡವೂರಿನಲ್ಲಿ ಶಿರ್ಡಿ ಸಾಯಿಬಾಬಾ ಮಂದಿರದಲ್ಲಿ ಸ್ವಾಗತಿಸಲಾಯಿತು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಲ್ ಕಿಣಿ, ಮಿಶನ್ ಕಾಲಡಿ ಟು ಕೇದಾರ್ ತಂಡವು ಈ 2,300 ಕಿ.ಮೀ. ದೂರವನ್ನು ಜೂ. 15ರಂದು ತಲುಪಲಿದೆ. ಈ ಮಾರ್ಗದಲ್ಲಿ ಹಿಂದೆ ಶಂಕರಾಚಾರ್ಯರು ಸಂಚರಿಸಿದ ಪುಣ್ಯ ಕ್ಷೇತ್ರಗಳಿಗೆ ತೆರಳಿ, ಅಲ್ಲಿನ ಮೃತ್ತಿಕೆಯನ್ನು ಕೂಡ ಸಂಗ್ರಹಿಸಿ ಕೇದಾರಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಶಂಕರಾಚಾರ್ಯರ ಸಮಾಧಿಗೆ ಹಾಕಲಿದೆ. ಶಂಕರಾಚಾರ್ಯರ ತಾಯಿಯ ತವರೂರಾದ ಕೇರಳದ ಪಿರವಂ ಎಂಬಲ್ಲಿಂದ ಮೊದಲ ಹಿಡಿ ಮಣ್ಣು ಸಂಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ.
63 ಕ್ಷೇತ್ರ ದರ್ಶನ: ಶಂಕರಾಚಾರ್ಯರು ಸನ್ಯಾಸ ದೀಕ್ಷೆ ಪಡೆದ ನರ್ಮದಾ ನದಿ ತೀರವೂ ಸೇರಿದಂತೆ ಒಟ್ಟು 63 ಕ್ಷೇತ್ರಗಳನ್ನು ಸಂದರ್ಶಿಸಲಿದ್ದೇವೆ.
ಪ್ರಯಾಣಕ್ಕೆ ಮೊದಲು ನಾಲ್ಕ ವೇದಗಳ ಪ್ರತೀಕವಾಗಿ ಶಂಕರಾಚಾರ್ಯರು ಸ್ಥಾಪಿಸಿದ 4 ಆಶ್ರಮಗಳಿಗೆ ತೆರಳಿ ಅಲ್ಲಿನ ಯತಿಗಳ ಆಶೀರ್ವಾದ ಪಡೆಯಲಾಗಿದೆ ಎಂದು ತಿಳಿಸಿದರು.
ಈ ತಂಡದಲ್ಲಿ ಸಂಯೋಜಕ ರಾಘವ ಚೌಧುರಿ, ಉಜೈನಿಯ ವೇದ ಪಂಡಿತ ಮಧುರ್ ತಿವಾರಿ ಇದ್ದಾರೆ.
ಉಡುಪಿಯಲ್ಲಿ ಕೇಮಾರು ಸಾಂದೀಪನಿ ಆಶ್ರಮದ ಶ್ರೀಈಶ ವಿಠಲದಾಸ ಸ್ವಾಮೀಜಿ ಈ ತಂಡವನ್ನು ಬರಮಾಡಿಕೊಂಡು ಉಡುಪಿಯ ಮೃತ್ತಿಕೆ ಹಸ್ತಾಂತರಿಸಿದರು.
ಸಾಯಿಬಾಬಾ ಮಂದಿರದ ದಿವಾಕರ ಶೆಟ್ಟಿ ಮತ್ತು ಇತರ ಭಕ್ತರಾದ ಎರ್ಮಾಳು ಶಶಿಧರ ಶೆಟ್ಟಿ, ಮಹಾಬಲ ಕುಂದರ್, ಅಶೋಕ್ ಕೊಡವೂರು, ಮೋಹನಚಂದ್ರ ನಂಬಿಯಾರ್, ಮೋಹನ್ ದಾಸ್ ಪಡಿಯಾರ್ ಇದ್ದರು.