1.52 ಕೋಟಿ ಮಿಗತೆ ಬಜೆಟ್ ಮಂಡನೆ
ಉಡುಪಿ: ಈ ಬಾರಿ ಉಡುಪಿ ನಗರಸಭೆಯಲ್ಲಿ ರು. 1.52 ಕೋಟಿ ಮಿಗತೆ ಬಜೆಟ್ ಮಂಡಿಸಲಾಗಿದೆ. ಇತ್ತೀಚೆಗೆ ನಗರಸಭೆ ಅಧ್ಯಕ್ಷ ಪಿ. ಯುವರಾಜ್ 2014- 15ನೇ ಸಾಲಿನ ಬಜೆಟ್ ಮಂಡಿಸಿದರು.
ನಂತರ ನಡೆದ ಬಜೆಟ್ ಮೇಲಿನ ಚರ್ಚೆಯಲ್ಲಿ ಸಹಜವಾಗಿಯೇ ಆಡಳಿತ ಪಕ್ಷ ಕಾಂಗ್ರೆಸ್ ಸದಸ್ಯರು ಬಜೆಟ್ನ್ನು ಮುಕ್ತಕಂಠದಿಂದ ಸ್ವಾಗತಿಸಿದರೆ, ವಿಪಕ್ಷ ಬಿಜೆಪಿ ಸದಸ್ಯು ಹುಳುಕು ಕಂಡುಹಿಡಿಯುವ ಪ್ರಯತ್ನ ಮಾಡಿದರು.
ಹಿಂದಿನ ವರ್ಷದ ಶಿಲ್ಕು ರು. 25.42 ಕೋಟಿ ಲಭ್ಯ ಇದ್ದು, ಈ ಆರ್ಥಿಕ ಸಾಲಿನಲ್ಲಿ ರು. 49.55 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ಇವೆರಡೂ ಸೇರಿ ರು. 74.97 ಕೋಟಿ ಆಗಿದ್ದು, ಇದರಲ್ಲಿ ವಿವಿಧ ಯೋಜನೆಗಳ ಮೂಲಕ ರು. 73.44 ಕೋಟಿ ಖರ್ಚು ಮಾಡಲು ನಿರ್ಧರಿಸಲಾಗಿದೆ. ಎಲ್ಲವೂ ಈ ಲೆಕ್ಕಾಚಾರದಂತೆ ನಡೆದರೆ ಅಂತಿಮವಾಗಿ 1.53 ಕೋಟಿ ನಗರಸಭೆಗೆ ಉಳಿತಾಯವಾಗಲಿದೆ ಎಂದು ಅಧ್ಯಕ್ಷರು ಬಜೆಟ್ ಮಂಡಿಸಿದರು.
ಗದ್ದಲ: ಇತ್ತೀಚಿನ ದಿನಗಳಲ್ಲಿ ನಗರಸಭೆಯ ಸಾಮಾನ್ಯ ಸಭೆಗಳು ಗದ್ದಲ ಇಲ್ಲದೆ ನಡೆದದ್ದೇ ಇಲ್ಲ, ಇದಕ್ಕೆ ಬಜೆಟ್ ಸಾಮಾನ್ಯ ಸಭೆ ಕೂಡ ಹೊರತಾಗಿರಲಿಲ್ಲ. ಬಜೆಟ್ ಚರ್ಚೆ ನಡುವೆ ಬಜೆಟ್ಗೆ ಸಂಬಂಧಿಸಿದ ನಿವೇಶನ ಅರ್ಜಿಗಳ ಬಗ್ಗೆ ಅನಗತ್ಯವಾಗಿ ಆಡಳಿತ ಮತ್ತು ವಿಪಕ್ಷ ಸದಸ್ಯರು ಅತ್ಯಂತ ಕರ್ಕಶವಾಗಿ ಬಾಯಿ ಬಾಯಿ ಮಿಲಾಯಿಸಿದರು. ಉಪಾಧ್ಯಕ್ಷೆ ಅಮೃತಾ ಕೃಷ್ಣಮೂರ್ತಿ, ಪೌರಾಯುಕ್ತ ಶ್ರೀಕಾಂತ್ ರಾವ್ ಇದ್ದರು. ಆಡಳಿತ ಪಕ್ಷದ ಪರವಾಗಿ ರಮೇಶ್ ಕಾಂಚನ್, ಮೀನಾಕ್ಷಿ ಮಾಧವ, ಶಾಂತಾರಾಮ್ ಸಾಲ್ವಾಂಕಾರ್ ಬಜೆಟ್ ಶ್ಲಾಘಿಸಿದರು. ವಿಪಕ್ಷದ ದಿನಕರ ಶೆಟ್ಟಿ ಹರ್ಗೆ, ವಸಂತಿ ಶೆಟ್ಟಿ, ಶ್ಯಾಮಪ್ರಸಾದ್ ಕುಡ್ವ, ನರಸಿಂಹ ನಾಯಕ್ ಮುಂತಾದವರು ಬಜೆಟ್ ವಿಶ್ಲೇಷಿಸಿದರು.
ಆದಾಯ ನಿರೀಕ್ಷೆ
ನಗರಸಭೆಯ ಪ್ರಮುಖ ಆದಾಯ ಆಸ್ತಿ ತೆರಿಗೆ 7 ಕೋಟಿ, ನೀರಿನ ಶುಲ್ಕ ರು. 7 ಕೋಟಿ ಸಂಗ್ರಹದ ಆಶಯ ಬಜೆಟ್ನಲ್ಲಿ ವ್ಯಕ್ತಪಡಿಸಲಾಗಿದೆ. ಕೇಂದ್ರದಿಂದ ರು. 5.50 ಕೋಟಿ, ರಾಜ್ಯದಿಂದ ರು. 11 ಕೋಟಿ, ಸಿಬ್ಬಂದಿ ವೇತನ ಅನುದಾನ ರು. 3.15 ಕೋಟಿ, ವಿದ್ಯುತ್ ಬಿಲ್ ಹೊಂದಾಣಿಕೆ ಅನುದಾನ 4 ಕೋಟಿ ಅನುದಾನವನ್ನು ನಿರೀಕ್ಷೆ ಮಾಡುತ್ತಿದೆ. ಈ ಬಾರಿ ಪರ್ಯಾಯೋತ್ಸವ ನೆಪದಲ್ಲಿ ರು. 3 ಕೋಟಿ ಅನುದಾನಕ್ಕೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಅಧಿಭಾರ ಶುಲ್ಕ ರು. 35 ಲಕ್ಷ, ಸಂಸದ- ಶಾಸಕರಿಂದ ರು. 20 ಲಕ್ಷ, ವ್ಯಾಪಾರ ಪರವಾನಗಿ ಮತ್ತು ಜಾಹೀರಾತು ಶುಲ್ಕ ರು. 30 ಲಕ್ಷ, ಒಳಚರಂಡಿ ಜೋಡಣೆ ಶುಲ್ಕ ರು. 30 ಲಕ್ಷ, ನಗರಸಭೆಯ ಕಟ್ಟಡಗಳ ಬಾಡಿಗೆಯಿಂದ ರು. 1 ಕೋಟಿ ನಿರೀಕ್ಷಿಸಲಾಗಿದೆ.
ಖರ್ಚು ಹೀಗೆ
ಆದಾಯದ ದೊಡ್ಡ ಮೊತ್ತವನ್ನು ರಸ್ತೆಗಳ ಅಭಿವೃದ್ಧಿಗೆ ರು. 10.50 ಕೋಟಿ ತೆಗೆದಿರಿಸಲಾಗಿದೆ. ಇದರ ದೊಡ್ಡ ಮೊತ್ತ ರು. 5.66 ಕೋಟಿ ನಗರಸಭೆಯ ಸಿಬ್ಬಂದಿ ವೇತನ, ಆಡಳಿತಾತ್ಮಕ ವೆಚ್ಚಗಳಿಗೆ ವಿನಿಯೋಗವಾಗುತ್ತದೆ. ಚರಂಡಿ, ಕಾಲುದಾರಿ, ರಸ್ತೆ ಇತ್ಯಾದಿ ಲೋಕೋಪಯೋಗಿ ಕಾಮಗಾರಿಗಳಿಗೆ ರು. 2.50 ಕೋಟಿ, ದಾರಿದೀಪಗಳ ನಿರ್ವಹಣೆಗೆ ರು. 75 ಲಕ್ಷ, ಹೊಸ ದಾರಿದೀಪಗಳ ಅಳವಡಿಕೆಗೆ ರು. 1.10 ಕೋಟಿ, ನೀರಿನ ವಿತರಣೆಗೆ ರು. 3.65 ಕೋಟಿ, ಘನತಾಜ್ಯ ವಿಲೇವಾರಿಗೆ ರು. 4.10 ಕೋಟಿ, ಒಳಚರಂಡಿ- ಶುದ್ಧೀಕರಣ ಘಟಕ ನಿರ್ವಹಣೆಗೆ ರು. 3.10 ಕೋಟಿ, ಉದ್ಯಾನವನ ನಿರ್ವಹಣೆಗೆ ರು. 95.75 ಲಕ್ಷ, ಕಲ್ಯಾಣನಿಧಿ ರು. 37 ಲಕ್ಷ, ಸಮಾಜ ಕಲ್ಯಾಣ ಯೋಜನೆಗಳಿಗೆ ರು. 3.25 ಕೋಟಿ ವೆಚ್ಚ ಮಾಡಲು ನಿರ್ಧರಿಸಲಾಗಿದೆ.
ಖಾಸಗೀಕರಣ
ನಗರಸಭೆಯ ಅನೇಕ ಅಭಿವೃದ್ಧಿ ಯೋಜನೆಗಳಲ್ಲಿ ಖಾಸಗಿ ಸಹಭಾಗಿತ್ವ ಹೆಚ್ಚುತ್ತಿರುವುದು ಈ ಬಾರಿಯ ಬಜೆಟ್ನಲ್ಲಿ ವ್ಯಕ್ತವಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ವೃತ್ತಗಳನ್ನು ನಿರ್ಮಿಸುವುದಕ್ಕೆ, ನಗರಸಭೆ ವ್ಯಾಪ್ತಿಯ ಸ್ಮಶಾನಗಳ ಅಭಿವೃದ್ಧಿಯನ್ನು ಖಾಸಗಿ ಸಂಸ್ಥೆಗಳಿಗೆ ಬಿಟ್ಟು ಕೊಡುವುದಕ್ಕೆ, ಖಾಸಗಿ ಸಹಭಾಗಿತ್ವದಲ್ಲಿ ಹೈಟೆಕ್ ಶೌಚಾಲಯ ಮತ್ತು ಮೊಬೈಲ್ ಶೌಚಾಲಯಗಳ ನಿರ್ಮಾಣಕ್ಕೆ ಯೋಜಿಸಲಾಗಿದೆ. ಈ ಹಿಂದಿನಂತೆ ಈ ಬಾರಿಯೂ ತ್ಯಾಜ್ಯ ಸಂಗ್ರಹಕ್ಕೆ ಸ್ವಸಹಾಯ ಸಂಘಗಳನ್ನು ಬಳಸಿಕೊಳ್ಳಲಾಗುವುದಕ್ಕೆ ಮತ್ತು ನಗರಸಭೆಯ ಆದಾಯ ಹೆಚ್ಚಿಸಲು ಖಾಸಗಿ ಸಹಭಾಗಿತ್ವದಲ್ಲಿ ನಗರದ ದಿನವಹಿ ತರಕಾರಿ ಮಾರುಕಟ್ಟೆ ಬಳಿ ಹೊಸದಾಗಿ ವಾಣಿಜ್ಯ ಸಂಕೀರ್ಣ ನಿರ್ಮಿಸುವುದಕ್ಕೆ ನಿರ್ಧರಿಸಲಾಗಿದೆ.