ಟ್ಯಾಕ್ಸಿಮೆನ್ಸ್ ಅಸೋಸಿಯೇಶನ್ ಸಭೆ
ಉಡುಪಿ: ಜಿಲ್ಲಾ ಟ್ಯಾಕ್ಸಿಮೆನ್ಸ್ ಅಸೋಸಿಯೇಶನ್ ಉಡುಪಿ ಇದರ 43ನೇ ವಾರ್ಷಿಕ ಮಹಾಸಭೆ ಮಂಗಳವಾರ ಆದಿ ಉಡುಪಿಯ ಲಕ್ಷ್ಮೀ ಸಭಾಭವನದಲ್ಲಿ ನಡೆಯಿತು. ಅಸೋಸಿಯೇಶನಿನ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ. ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯಧ್ಯಕ್ಷ ಸುರೇಶ್ ಅತ್ತೂರ್, ಉಪಾಧ್ಯಕ್ಷ ಹರಿದಾಸ್ ಭಟ್, ರಮೇಶ ಸುವರ್ಣ ಅಜೆಕಾರ್, ರವಿ ಶೆಟ್ಟಿ ಪಡುಬಿದ್ರಿ, ರಾಘವೇಂದ್ರ ಜಿ.ಕೆ. ಕುಂದಾಪುರ, ಸತೀಶ ಶೆಟ್ಟಿ ಇಂದ್ರಾಳಿ, ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು ಹಾಗೂ 1400 ಸದಸ್ಯರು ಉಪಸ್ಥಿತರಿದ್ದರು.
ಪ್ರೊ. ಮೇಟಿ ಮುದಿಯಪ್ಪ ಆಯ್ಕೆ
ಉಡುಪಿ: ಮಲ್ಪೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಮೇಟಿ ಮುದಿಯಪ್ಪ ಅವರು ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಉದ್ಘೋಷ, ಕಡಲಾಳದ ಮುತ್ತು, ನನ್ನೊಳಗಿನ ಕವಿತೆ - ಕವನ ಸಂಕಲನಗಳು, ಮಾನವೀಯತೆಯ ಸುತ್ತಮುತ್ತ (ಚಿಂತನೆಗಳು), ಕಾಡ್ಯಾವ ನೆನಪು ಕಥಾಸಂಕಲನ ಸಹಿತ ಪ್ರಮುಖ ಕೃತಿಗಳನ್ನು ಬರೆದಿರುವ ಅವರು ಕಳೆದ 3 ದಶಕಗಳಿಂದ ಸಾಹಿತ್ಯ ಸೇವೆ ಸಲ್ಲಿಸುತ್ತಿದ್ದಾರೆ. ಎನ್‌ಎಸ್‌ಎಸ್ ಘಟಕದ ಉಪನ್ಯಾಸಕರಾಗಿದ್ದಾಗ ರಾಜ್ಯಮಟ್ಟದ ಎನ್‌ಎಸ್‌ಎಸ್ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ರಂಗನಟ, ಸಾಹಿತಿ, ಶಿಕ್ಷಣತಜ್ಞ, ಸಂಘಟನಕಾರರಾಗಿ ಕಾರ್ಯನಿರ್ವಹಿದ್ದಾರೆ. ಧಾರವಾಹಿ ಮತ್ತು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಮಾ. 6, 7ರಂದು ವಿಚಾರ ಸಂಕಿರಣ
ಉಡುಪಿ: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಮಾ. 6ರ ಹಾಗೂ 7 ರಂದು ಖಗೋಳಿಕರಣ , ಮಾನವ ಹಕ್ಕುಗಳು ಹಾಗೂ ಪ್ರಜಾತಂತ್ರದ ಬಗ್ಗೆ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ ಎಂದು ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ. ನೇರಿ ಕರ್ನೇಲಿಯೊ ಹೇಳಿದರು. ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಚಾರ ಸಂಕಿರಣದಲ್ಲಿ ಜಾಗತೀಕರಣ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ, ಜಾಗತೀಕರಣ ಮತ್ತು ಭಾರತೀಯ ರಾಜಕೀಯ ಚರ್ಚೆಗಳು, ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವ ಇನಿತ್ತರ ವಿಷಯಗಳ ಬಗ್ಗೆ ಅಂತಾರಾಷ್ಟ್ರೀಯ ಖ್ಯಾತಿ ಪಡೆದ ಹಲವು ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಸಹಾಯಕ ಸಂಯೋಜಕರು ಡಾ. ಜಯರಾಂ ಶೆಟ್ಟಿಗಾರ್, ಖಜಾಂಚಿ ಮೆಲ್ವಿನ್ ರೇಗೋ ಇದ್ದರು.
ಮೆಹ್ಫೂಜ್ ಶೇಖ್‌ಗೆ ಪಿಎಚ್‌ಡಿ
ಉಡುಪಿ: ಬೆಂಗಳೂರು ರಾಷ್ಟ್ರೀಯ ಅಂತರಿಕ್ಷ ಪ್ರಯೋಗಶಾಲೆ (ಎನ್‌ಎಎಲ್) ಯುವ ವಿಜ್ಞಾನಿ ಕಾಪು ಕೊಂಬಗುಡ್ಡೆಯ ಮೊಹಮ್ಮದ್ ಮೆಹ್ಫೂಜ್ ಶೇಖ್ ಅವರಿಗೆ ಮಂಗಳೂರು ವಿವಿ ಡಾಕ್ಟರೇಟ್ ಪದವಿ ನೀಡಿದೆ. ಅವರು ಎನ್.ಎ.ಎಲ್.ನ ಡಾ.ಯು.ಎನ್.ಸಿನ್ಹಾ ಹಾಗೂ ಮಂಗಳೂರು ವಿವಿಯ ಪ್ರೊ.ಎಂ.ಎ. ಖಾನ್ ಮಾರ್ಗದರ್ಶನದಲ್ಲಿ ಮಹಾಪ್ರಬಂಧ ಮಂಡಿಸಿದ್ದರು. ಅವರು ಕೊಂಬಗುಡ್ಡೆಯ ನೂರುಲ್ಲಾ ಶೇಖ್ ಹಾಗೂ ಹಲೀಮಾ ಬೇಗಂ ದಂಪತಿ ಪುತ್ರ.
ಗಂಗೊಳ್ಳಿ ಠಾಣಾಧಿಕಾರಿ ಗೋವರ್ಧನ
ಗಂಗೊಳ್ಳಿ: ಇಲ್ಲಿನ ಪೊಲೀಸ್ ಠಾಣೆಯ ನೂತನ ಉಪನಿರೀಕ್ಷಕರಾಗಿ ಬೆಂಗಳೂರು ಮೂಲದ ಗೋವರ್ಧನ ಎಂ. ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ. 2007ರಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಸೇವೆಗೆ ಸೇರಿದ್ದ ಇವರು ಆಗುಂಬೆ, ಕಾರ್ಕಳ, ಕೆಜಿಎಫ್ ಹಾಗೂ ಬೆಂಗಳೂರಿನಲ್ಲಿ ವಿಐಪಿ ಸೆಕ್ಯೂರಿಟಿ ಘಟಕದಲ್ಲಿ ಸೇವೆ ಸಲ್ಲಿಸಿ ಇದೀಗ ಗಂಗೊಳ್ಳಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.
ಯಕ್ಷಗಾನ ಕಲಾಕ್ಷೇತ್ರ ವಾರ್ಷಿಕೋತ್ಸವ
ಉಡುಪಿ: ಗುಂಡಿಬೈಲು ಯಕ್ಷಗಾನ ಕಲಾಕ್ಷೇತ್ರದ 63ನೇ ವಾರ್ಷಿಕೋತ್ಸವ ಮತ್ತು ಭೋಜಪ್ಪ ಸುವರ್ಣ ಪ್ರಶಸ್ತಿ ಪ್ರದಾನ ಸಮಾರಂಭ ಯಕ್ಷಗಾನ ಕಲಾಕ್ಷೇತ್ರದ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಇತ್ತೀಚಿಗೆ ನೆರವೇರಿತು. ಬಡಗುತಿಟ್ಟಿನ ಹಿರಿಯ ಪ್ರಖ್ಯಾತ ಕಲಾವಿದ ಆರ್ಗೋಡು ಮೋಹನ್ ದಾಸ್ ಶೆಣೈಗೆ ಈ ಸಾಲಿನ ನಿಟ್ಟೂರು ಭೋಜಪ್ಪ ಸುವರ್ಣ ಪ್ರಶಸ್ತಿ ನೀಡಲಾಯಿತು. ಉಡುಪಿ ತುಳುಕೂಟದ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ಯು. ವಿಶ್ವನಾಥ ಶೆಣೈ, ಸಂಸ್ಥೆಯ ಅಧ್ಯಕ್ಷ ಜಿ. ಬಾಬುಗೌಡ, ಉಪಾಧ್ಯಕ್ಷ ಡಾ. ರಮೇಶ್ ಚಿಂಬಳ್ಕರ್, ಕಾರ್ಯದರ್ಶಿ ಕೇಶವಮೂರ್ತಿ ಬೆಲ್ಪತ್ರೆ, ಸಂಸ್ಥೆಯ ಹಿರಿಯ ಕಲಾವಿದ ಭಾಗವತ ನಿಟ್ಟೂರು ಶೀನಪ್ಪ ಸುವರ್ಣ ಇದ್ದರು.
ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಸ್ವಾಗತಿಸಿದರು. ನಂತರ 'ಚಕ್ರಚಂಡಿಕ' ಎಂಬ ಪೌರಾಣಿಕ ಯಕ್ಷಗಾನ ಬಯಲಾಟ ಜರುಗಿತು.
ಅಮ್ಮುಂಜೆ ವೆಂಕಟೇಶ್ ನಾಯಕ ಆಯ್ಕೆ
ಉಡುಪಿ: ಅಖಿಲ ಭಾರತ ಲೆಕ್ಕ ಪರಿಶೋಧಕರ ಸಂಸ್ಥೆಯಾದ ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಉಡುಪಿ ಶಾಖಾಧ್ಯಕ್ಷರಾಗಿ ಅಮ್ಮುಂಜೆ ವೆಂಕಟೇಶ್ ನಾಯಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಪ್ರಶಾಂತ್ ಹೊಳ್ಳ ಟಿ., ಕಾರ್ಯದರ್ಶಿಯಾಗಿ ಸದಾಶಿವ ಪೈ, ಖಜಾಂಚಿಯಾಗಿ ಗಣೇಶ್ ಬಿ. ಕಾಂಚನ್, ದಕ್ಷಿಣ ಭಾರತ ಸಿ.ಎ. ವಿದ್ಯಾರ್ಥಿ ಸಂಘ ಉಡುಪಿ ಶಾಖೆ ಅಧ್ಯಕ್ಷರಾಗಿ ಪದ್ಮನಾಭ ಪೈ ಆಯ್ಕೆಯಾಗಿದ್ದಾರೆ.
ಶಿವ ಪಾರ್ವತಿ ಕಲ್ಯಾಣೋತ್ಸವ
ಗಂಗೊಳ್ಳಿ: ಶ್ರೀ ಇಂದುಧರ ದೇವಸ್ಥಾನ ಗಂಗೊಳ್ಳಿ ಇವರ ವತಿಯಿಂದ ತೃತೀಯ ವರ್ಷದ ಶಿವ ಪಾರ್ವತಿ ಕಲ್ಯಾಣೋತ್ಸವ ಕಾರ್ಯಕ್ರಮ ಬುಧವಾರ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನಡೆಯಿತು.
ಪ್ರಧಾನ ಅರ್ಚಕ ಪಾಂಡುರಂಗ ಮತ್ತು ಸಂಡಿಗರ ನೇತೃತ್ವದಲ್ಲಿ ಗೋಧೂಳಿ ಲಗ್ನ ಮುಹೂರ್ತದಲ್ಲಿ ಕಲ್ಯಾಣೋತ್ಸವದ ಧಾರ್ಮಿಕ ವಿಧಿವಿಧಾನಗಳು ಶಾಸ್ತ್ರೋಕ್ತವಾಗಿ ಜರಗಿದವು. ದೇವಳದ ಆಡಳಿತ ಮಂಡಳಿ ಸದಸ್ಯರು, ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.