ಉಡುಪಿ: ಬಿಜೆಪಿಯಿಂದ 4 ದಿನಗಳ ಪಾದಯಾತ್ರೆ
ಉಡುಪಿ: ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲೆಯನ್ನು ಹಾದು ಹೋಗುವ ರಾಹೆ 66ರಲ್ಲಿ 4 ದಿನಗಳ 112 ಕಿ.ಮಿ. ಉದ್ದದ 'ಜನಾಂದೋಲನ ಪಾದಯಾತ್ರೆ' ಬುಧವಾರ ಆರಂಭವಾಗಿದೆ.
ಉಡುಪಿ ಜಿಲ್ಲೆಯ ಲೋಕಸಭಾ, ವಿಧಾನಸಭಾ, ನಗರಸಭಾ ಸ್ಥಾನಗಳನ್ನು ಕಳೆದುಕೊಂಡಿರುವ ಉಡುಪಿ ಜಿಲ್ಲಾ ಬಿಜೆಪಿ ಮುಂಬರುವ ಲೋಕಸಭಾ ಚುನಾವಣೆಗೆ ಸಾಕಷ್ಟು ಮುಂಚಿತವಾಗಿಯೇ ಭರ್ಜರಿ ತಯಾರಿ ಆರಂಭಿಸಿದೆ. ಈ ಮೂಲಕ ಮತ್ತೆ ತನ್ನ ಪರ ಜನಾಭಿಪ್ರಾಯವನ್ನು ಬಿಜೆಪಿ ನಿರೀಕ್ಷಿಸುತ್ತಿದೆ.
ಅಡಕೆ ನಿಷೇಧದ ಪ್ರಸ್ತಾಪ, ಆಮೆಗತಿಯಲ್ಲಿ ಸಾಗುತ್ತಿರುವ ರಾಹೆ 66ರ ಚತುಷ್ಪಥ ಕಾಮಗಾರಿ, ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಉಗ್ರರ ಚಟುವಟಿಕೆ ಎಂಬ 3 ಅಸ್ತ್ರಗಳನ್ನು ಬಳಸಿಕೊಂಡು ಕೇಂದ್ರ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರಗಳ ವಿರುದ್ಧ ನಡೆಯುತ್ತಿರುವ ಈ ಪಾದಯಾತ್ರೆಗೆ ಬುಧವಾರ ಜಿಲ್ಲೆಯ ದಕ್ಷಿಣ ಗಡಿ ಹೆಜಮಾಡಿಯಲ್ಲಿ ಚಾಲನೆ ನೀಡಲಾಯಿತು. ಈ ಪಾದಯಾತ್ರೆ ಸುಮಾರು 60 ಕಿ.ಮಿ. ಕ್ರಮಿಸಿ ಶುಕ್ರವಾರ ಜಿಲ್ಲೆಯ ಉತ್ತರದ ಗಡಿ ಬೈಂದೂರಿನಲ್ಲಿ ಸಮಾರೋಪಗೊಳ್ಳಲಿದೆ.
ಮುಂಬರುವ ಲೋಕಸಭಾ ಚುನಾವಣೆಗೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ, ಇದೇ ಕ್ಷೇತ್ರದ ಮಾಜಿ ಸಂಸದ, ಮಾಜಿ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ ಈ ಪಾದಯಾತ್ರೆಗೆ ಚಾಲನೆ ನೀಡಿರುವುದು, ಅವರು ಸಂಭಾವ್ಯ ಅಭ್ಯರ್ಥಿ ಎಂಬುದಕ್ಕೆ ಇನ್ನಷ್ಟು ಪುಷ್ಟಿ ನೀಡಿದೆ.
ಪಾದಯಾತ್ರೆ ನೇತೃತ್ವವನ್ನು ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ, ಪ್ರ. ಕಾರ್ಯದರ್ಶಿ ನವೀನ್ ಕುತ್ಯಾರು, ಜಿಲ್ಲಾ ವಕ್ತಾರ ಮಟ್ಟಾರು ರತ್ನಾಕರ ಹೆಗ್ಡೆ, ಮಾಜಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಮೆಂಡನ್ ಮುಂತಾದವರು ವಹಿಸಿಕೊಂಡಿದ್ದಾರೆ. ಮೊದಲ ದಿನ 28.50 ಕಿ.ಮಿ. ದೂರ ಕ್ರಮಿಸಿದ ಪಾದಯಾತ್ರೆ ಉಡುಪಿಯಲ್ಲಿ ತಂಗಿದೆ. ನಡುವೆ ಕಾಪು ಪೇಟೆ ಮತ್ತು ಕಟಪಾಡಿ ಪೇಟೆಯಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಲಾಯಿತು.
ಇಂದು ಮತ್ತೆ 27 ಕಿ.ಮೀ. ಕ್ರಮಿಸಲಿರುವ ಪಾದಯಾತ್ರೆ ತೆಕ್ಕಟ್ಟೆಯಲ್ಲಿ ವಿರಮಿಸಲಿದೆ. ನಾಳೆ 23 ಕಿ.ಮೀ. ಕ್ರಮಿಸಿ ಮರವಂತೆಯಲ್ಲಿ ವಿರಮಿಸಿ, ನಾಡಿದ್ದು 15 ಕಿ.ಮೀ. ಕ್ರಮಿಸಿ ಸಂಜೆ 5 ಗಂಟೆಗೆ ಬೈಂದೂರಿನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಇದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಷಿ ಭಾಗವಹಿಸಲಿದ್ದಾರೆ.