ಸುಬ್ರಹ್ಮಣ್ಯ: ಎಸ್‌ಸಿಡಿಸಿಸಿ ಶಾಖೆ ಉದ್ಘಾಟನೆ
ಸುಬ್ರಹ್ಮಣ್ಯ: ಜನರಿಂದಲೇ ನಡೆಸಲ್ಪಡುವ ಸಹಕಾರಿ ಬ್ಯಾಂಕ್‌ಗಳು ನಗರ, ಗ್ರಾಮೀಣ ಪರಿಸರದ ಜನರ ಆಶೋತ್ತರಗಳನ್ನು ಈಡೇರಿಸುವ ಜನರಿಗೆ ಹತ್ತಿರವಾದ ಮತ್ತು ಅಪ್ತವಾದ ಬ್ಯಾಂಕ್ ಆಗಿ ಪರಿವರ್ತನೆಯಾಗಿರುವುದು ಸಹಕಾರಿ ಕ್ರಾಂತಿಗೆ ಸಾಕ್ಷಿ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ 64ನೇ ಶಾಖೆಯನ್ನು ಸುಬ್ರಹ್ಮಣ್ಯ ಗ್ರಾ.ಪಂ. ಸಂಕೀರ್ಣದಲ್ಲಿ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಎಂ.ಎನ್.ರಾಜೇಂದ್ರಕುಮಾರ್ ಹಿರಿತನದಲ್ಲಿ ಎಲ್ಲರ ಸಹಕಾರದಿಂದ ಶೀಘ್ರವೇ 100 ಶಾಖೆಗಳನ್ನು ತೆರೆದು ಗ್ರಾಮೀಣ ಜನತೆಗೆ ಹೆಚ್ಚಿನ ಸೇವೆ ಒದಗಿಸುವಂತಾಗಲಿ ಎಂದು ಸ್ವಾಮೀಜಿ ಹೇಳಿದರು.
ರು. 6 ಕೋಟಿ ಠೇವಣಿ ಸಂಗ್ರಹ: ದೇವಾಲಯ ನಗರ ಸುಬ್ರಹ್ಮಣ್ಯವು ಇತ್ತೀಚಿನ ದಶಕದಲ್ಲಿ ಭಾರಿ ಅಭಿವೃದ್ಧಿಯಾಗುತ್ತಿದೆ. ಇಲ್ಲಿ ನಮ್ಮ ಬ್ಯಾಂಕ್‌ನ ಶಾಖೆ ತೆರೆಯಬೇಕೆಂಬ ಆಶಯ ಇಂದು ಈಡೇರಿದೆ. ಆರಂಭದ ದಿನವೇ 6 ಕೋಟಿ ಠೇವಣಿ ಸಂಗ್ರಹವಾಗಿದೆ. ಸುಬ್ರಹ್ಮಣ್ಯದ ಅಭಿವದ್ಧಿಗೆ ಜಿಲ್ಲಾ ಸಹಕಾರಿ ಬ್ಯಾಂಕ್ ರು. 100 ಕೋಟಿ ಸಾಲ ನೀಡಲು ಸಿದ್ಧ ಎಂದು ರಾಜೇಂದ್ರಕುಮಾರ್ ಹೇಳಿದರು.
ಭದ್ರತಾ ಕೋಶವನ್ನು ವಸಂತಕುಮಾರ್ ಕೆದಿಲ ಉದ್ಘಾಟಿಸಿದರು. ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ, ಸುಳ್ಯ ತಾಲೂಕು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ವಿಮಲಾ ರಂಗಯ್ಯ ಆತಿಥಿಗಳಾಗಿದ್ದರು. ಬ್ಯಾಂಕ್ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ನಿರ್ದೇಶಕರಾದ ಬಿ. ನಿರಂಜನ್, ಭಾಸ್ಕರ್ ಎಸ್. ಕೋಟ್ಯಾನ್, ಕೆ.ಎಸ್. ದೇವರಾಜ್, ಎ.ವಿ. ತೀರ್ಥರಾಮ ಇದ್ದರು.