16ರಂದು ಅಂಗವಿಕಲರ ನಿರ್ದೇಶಕರ ಕಚೇರಿಗೆ ಮುತ್ತಿಗೆ
ಮಂಗಳೂರು: ವಿಶೇಷ ಶಾಲೆಗಳಿಗೆ ಅನುದಾನ ತಡೆಹಿಡಿದ ಸರ್ಕಾರದ ಧೋರಣೆ ವಿರೋಧಿಸಿ ಜ.16ರಂದು ವಿಶೇಷ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು, ವಿಶೇಷ ಮಕ್ಕಳು, ಅವರ ಹೆತ್ತವರು ಮತ್ತು ಶಾಲಾ ಆಡಳಿತ ಮಂಡಳಿ ಸದಸ್ಯರು ಬೆಂಗಳೂರಿನ ಅಂಗವಿಕಲರ ನಿರ್ದೇಶಕ ಕಚೇರಿಗೆ ಮುತ್ತಿಗೆ ಹಾಕಲಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರ ಸಂಘದ ಕಾರ್ಯದರ್ಶಿ ವಸಂತ ಕುಮಾರ್ ಶೆಟ್ಟಿ, 2007ರಿಂದ ಅನುದಾನಕ್ಕೆ ರಾಜ್ಯ ಸರ್ಕಾರಕ್ಕೆ ಸಂಘ ಒತ್ತಾಯಿಸುತ್ತಾ ಬಂದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗಳು ಪ್ರಸ್ತಾವನೆ ಪರಿಶೀಲನಾ ಹಂತದಲ್ಲಿದೆ ಎಂದು ಸುಳ್ಳು ಮಾಹಿತಿ ನೀಡುತ್ತಿವೆ ಎಂದರು. ಉಪಾಧ್ಯಕ್ಷೆ ಗಾಯತ್ರಿ ಪಂಜು, ಜಿಲ್ಲಾ ಪ್ರತಿನಿಧಿಗಳಾದ ಸಿಸ್ಟರ್ ತೆಲ್ಮಾ, ಮೀರಾ ಸತೀಶ್, ವಿನೋದ್ ಶೆಣೈ ಹಾಜರಿದ್ದರು.