ಚಲನಚಿತ್ರ ಕಲಾವಿದರನ್ನು ಮರೆತ ಸಮಿತಿ: ಮಂಜುನಾಥ್
ಮಡಿಕೇರಿ: ಮಡಿಕೇರಿಯಲ್ಲಿ ನಡೆಯುವ 80ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೊಡಗಿನ ಚಲನಚಿತ್ರ ಕಲಾವಿದರನ್ನು ಗುರುತಿಸಿ ಸನ್ಮಾನಿಸುವಲ್ಲಿ ಸಂಘಟಕರು ಮರೆತಿದ್ದು, ಕೂಡಲೇ ಸ್ಪಂದಿಸದಿದ್ದಲ್ಲಿ ಸಮ್ಮೇಳನದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್ ಮುಖಂಡ ಕೆ.ಕೆ. ಮಂಜುನಾಥ ಕುಮಾರ್ ಎಚ್ಚರಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಮಟ್ಟದಲ್ಲಿ ಚಲನಚಿತ್ರರಂಗದಲ್ಲಿ ಹೆಸರುವಾಸಿಯಾದ ಕೊಡಗಿನವರೇ ಆದ ಹಿರಿಯ ಕಲಾವಿದ ಜೈ ಜಗದೀಶ್, ನಿರ್ದೇಶಕ ಎ.ಟಿ. ರಘು, ನಾಯಕಿ ನಟಿ ಪ್ರೇಮಾ ಸೇರಿದಂತೆ ಹಲವು ಕಲಾವಿದರು ಸಿನಿಮಾ ರಂಗದಲ್ಲಿ ಹೆಸರು ಮಾಡಿ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇವರನ್ನು ಸಮ್ಮೇಳನದ ರೂವಾರಿಗಳು ಮರೆತಿರುವುದು ದುರದೃಷ್ಟಕರ ಎಂದರು. ಈ ಖ್ಯಾತ ಕಲಾವಿದರನ್ನು ಗೌರವಿಸಲು ಸಮಿತಿ ಮರೆತಿರುವುದು ಕಲಾವಿದರಿಗೆ ಮಾಡಿರುವ ಅವಮಾನವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಕಲಾವಿದರನ್ನು ಗೌರವಿಸದಿದ್ದರೆ ಸಮ್ಮೇಳನ ಸಂದರ್ಭ ಪ್ರತಿಭಟನೆ ನಡೆಸಬೇಕಾದೀತು ಎಂದು ಎಚ್ಚರಿಸಿದರು.