ತೆಂಕ ಗ್ರಾಪಂ ಪರಿವರ್ತನೆಗೆ ನರೇಗಾ ಕಾರಣ: ಶೀನ ಶೆಟ್ಟಿ
ಮಂಗಳೂರು: 'ಉದ್ಯೋಗ ಖಾತರಿ ಯೋಜನೆಯಡಿ ನಿರ್ವಹಿಸಲಾದ ಶಾಲೆ, ಅಂಗನವಾಡಿ ಮತ್ತು ಮನೆ, ತೋಟ, ದನದ ಕೊಟ್ಟಿಗೆ, ಸ್ಮಶಾನದಲ್ಲಿ ಜೈವಿಕ ಇಂಧನ ಗಿಡಗಳನ್ನು ಬೆಳೆಸುವ, ಶಾಲಾ ಮೈದಾನ, ತೋಡು ಹೂಳೆತ್ತುವ ಕಾಮಗಾರಿಯಿಂದ ತೆಂಕ ಗ್ರಾ.ಪಂ. ಮಾದರಿ ಗ್ರಾಮವಾಗಿ ಪರಿವರ್ತನೆಗೊಂಡಿದೆ' ಎಂದು ಒಂಬುಡ್ಸ್ಮನ್ ಶೀನ ಶೆಟ್ಟಿ ಹೇಳಿದರು. ಈ ಯೋಜನೆಯಡಿ ಈಗಾಗಲೇ 2013ನೇ ಸಾಲಿನಲ್ಲಿ 35 ಫಲಾನುಭವಿಗಳ ಜಮೀನುಗಳಲ್ಲಿ ಪೌಷ್ಟಿಕ ತೋಟ, 10 ಪರಿಶಿಷ್ಟ ಜಾತಿ, 2 ಅಲ್ಪ ಸಂಖ್ಯಾತ, 6 ಇತರ ಅರ್ಹ ಕುಟುಂಬಗಳಿಗೆ ದನದ ಕೊಟ್ಟಿಗೆ ನಿರ್ಮಾಣ, 1 ಅಂಗನವಾಡಿ ಮತ್ತು 2 ಶಾಲೆಗಳಲ್ಲಿ ಹಣ್ಣಿನ ತೋಟ ನಿರ್ಮಾಣ, 41 ಮನೆಗಳಲ್ಲಿ ಶೌಚಾಲಯ ನಿರ್ಮಾಣ, 2 ತೋಡುಗಳ ಹೂಳೆತ್ತುವ ಕಾಮಗಾರಿ ನಡೆಸಲಾಗಿದೆ ಎಂದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರಜನಿ ಮಾಹಿತಿ ನೀಡಿದರು. ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ನರೇಗಾ ಸಿಬ್ಬಂದಿ ಪ್ರತಿಭಾ ಇದ್ದರು.