ದೇರಳಕಟ್ಟೆ ಪ್ರಕರಣ: 'ಹೈ' ತನಿಖೆಗೆ ಆಗ್ರಹ
ಮಂಗಳೂರು: ದೇರಳಕಟ್ಟೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯನ್ನು ಅಪಹರಿಸಿ ಅಶ್ಲೀಲ ದೃಶ್ಯ ಚಿತ್ರೀಕರಣ ಮಾಡಿದ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದ್ದು, ಹೈಕೋರ್ಟ್ ಸುಪರ್ದಿಯಲ್ಲಿ ತನಿಖೆ ನಡೆಸುವಂತೆ ಎಬಿವಿಪಿ ಆಗ್ರಹಿಸಿದೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಬಿವಿಪಿ ರಾಜ್ಯ ಕಾರ್ಯದರ್ಶಿ ರಮೇಶ್, ನಗರ ಪೊಲೀಸ್ ಆಯುಕ್ತ ಮತ್ತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಜ.8ರಂದು ಪೊಲೀಸ್ ಕಮೀಷನರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು. 9ರಂದು ನೆಹರೂ ಮೈದಾನದಲ್ಲಿ ಮಹಿಳಾ ಜನಜಾಗೃತಿ ವೇದಿಕೆಯಿಂದ ಹೋರಾಟ ನಡೆಯಲಿದೆ. 11ರಂದು 'ಮಹಿಳಾ ಸುರಕ್ಷತೆ-ಸ್ವಾಸ್ಥ್ಯ ಸಮಾಜ' ದುಂಡು ಮೇಜಿನ ಸಮ್ಮೇಳನದಲ್ಲಿ ಪ್ರಸ್ತಾಪಗೊಳ್ಳಲಿದೆ. ಆಗಲೂ ಸ್ಪಂದಿಸದಿದ್ದರೆ ರಾಜ್ಯವ್ಯಾಪಿ ಹೋರಾಟ ನಡೆಸುವುದಾಗಿ ಹೇಳಿದರು. ವಿದ್ಯಾರ್ಥಿ ಮುಖಂಡರಾದ ನಿತೀಶ್ ಕುಮಾರ್, ರಕ್ಷಿತಾ, ಅನುಷ್ಕಾ ಹಾಜರಿದ್ದರು.