'ಸವಾಲಿಗೆ ಪ್ರತ್ಯುತ್ತರ ನೀಡುವ ಮನೋಭಾವ ಬೆಳೆಸಿಕೊಳ್ಳಿ'
ಉಪ್ಪಿನಂಗಡಿ: ಸಮಾಜದ ಪಿಡುಗಿನ ವಿರುದ್ಧವಾಗಿ ಹೋರಾಡುವ ಮನೋಭಾವ ಬೆಳೆಸಿಕೊಂಡು ಕಾರ್ಯಪ್ರವೃತ್ತರಾದರೆ ಮಾತ್ರ ಯುವಕ ಮತ್ತು ಯುವತಿ ಮಂಡಲಗಳ ಅಸ್ತಿತ್ವಕ್ಕೆ ಮೌಲ್ಯವಿರುತ್ತದೆ. ಯುವಕ ಮಂಡಲಗಳಂತಹ ಸಂಘಟನೆಗಳು ಸವಾಲು ಸ್ವೀಕರಿಸುವ ಮತ್ತು ಎದುರಾದ ಸವಾಲಿಗೆ ಪ್ರತ್ಯುತ್ತರ ನೀಡುವ ಮನೋಭಾವವನ್ನು ಬೆಳೆಸಿ ನವ ಸಮಾಜ ನಿರ್ಮಾಣ ಮಾಡಬೇಕು ಎಂದು ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು. ಅವರು ಶನಿವಾರ ನೆಲ್ಯಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಹಲವು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆದ ಪುತ್ತೂರು ತಾಲೂಕು ಯುವ ಜನ ಮೇಳ 2013- 14 ನ್ನು ಉದ್ಘಾಟಿಸಿ ಮಾತನಾಡಿದರು. ಸಹಾಯಕ ಕಮಿಷನರ್ ಕೃಷ್ಣ ಮೂರ್ತಿ ಮಾತನಾಡಿದರು. ತಾ.ಪಂ. ಅಧ್ಯಕ್ಷೆ ಶಶಿಪ್ರಭಾ, ಬಿಇಒ ಶಶಿಧರ್ ಜಿ.ಎಸ್., ಗಂಗಮ್ಮ, ಯು.ಪಿ. ವರ್ಗಿಸ್, ಮನೋರಮಾ ಭಟ್, ಬಾಬು ಮಾದೋಡಿ, ಭಾಸ್ಕರ ಎಸ್. ಗೌಡ, ಸುಧಾಕರ ರಾವ್ ಆರ್ಯಾಪು, ದಿನೇಶ್ ಮೆದು ಪಾಲ್ಗೊಂಡಿದ್ದರು.