'ಶುಚಿತ್ವ ಪಾಲಿಸದಿದ್ದರೆ ಬೀದಿಗೆ ಇಳಿಯಬೇಕಾದೀತು'
ಕಾರ್ಕಳ: ನಗರ ವ್ಯಾಪ್ತಿಯ ಪ್ರತಿಯೊಂದು ರಸ್ತೆಗಳಲ್ಲಿ ಶುಚಿತ್ವ ಪರಿಪಾಲನೆಯಾಗದೆ ಸಿಕ್ಕ ಸಿಕ್ಕಲ್ಲಿ ತ್ಯಾಜ್ಯ ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿರುವುದರಿಂದ ಎಲ್ಲೆಡೆಯಲ್ಲಿ ಗಬ್ಬುನಾತ ಬೀರಲು ಕಾರಣವಾಗಿದೆ. ಕಾನೂನು ಬಾಹಿರವಾಗಿ ತ್ಯಾಜ್ಯ ಎಸೆಯುತ್ತಿರುವವರ ವಿರುದ್ಧ ದಂಡ ವಿಧಿಸುವಲ್ಲಿ ಆರೋಗ್ಯ ವಿಭಾಗ ವಿಫಲವಾಗಿರುವುದು ಇದಕ್ಕೆ ಕಾರಣ. ಶುಚಿತ್ವ ಪರಿಪಾಲನೆ ಮಾಡಲು ಆರೋಗ್ಯ ವಿಭಾಗ ಹಿಂದೇಟು ಹಾಕುವುದಾದರೆ ಪಕ್ಷಭೇದ ಮರೆತು ನಗರದ ಸೌದರ್ಯ ಕಾಪಾಡಲು ಬೀದಿಗೆ ಇಳಿಯಬೇಕಾದಿತು ಎಂದು ಪುರಸಭಾ ಸದಸ್ಯರು ಎಚ್ಚರಿಸಿದರು.
ಸೋಮವಾರ ಪುರಸಭೆಯ ಸದಾನಂದ ಕಾಮತ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಪುರಸಭಾ ಅಧ್ಯಕ್ಷೆ ರಹಮತ್ ಶೇಖ್, ರಾಜಕೀಯ ರಹಿತವಾಗಿ ಅವೃದ್ಧಿ ಕಾರ್ಯಗಳನ್ನು ನಡೆಸುತ್ತೇನೆ. ಎಲ್ಲಾ ಕೌನ್ಸಿಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಗತ್ಯ ಯೋಜನೆ ತಯಾರು ಮಾಡುತ್ತೇನೆ ಎಂದು ಭರವಸೆ ನೀಡಿದರು.
ಸಮಸ್ಯೆಗೆ ಕಾರಣವಾಗಿರುವುದು ಹೊಟೇಲ್ ಉದ್ಯಮಿಗಳು ಹಾಗೂ ಕೆಲವು ನಾಗರಿಕರು. ಇದರ ಬಗ್ಗೆ ಜನಜಾಗೃತಿ, ಮಾಧ್ಯಮ ಹೇಳಿಕೆ ನೀಡಿದ ಬಳಿಕ ದಂಡ ವಸೂಲಿಗೆ ಕ್ರಮಕೈಗೊಳ್ಳುವ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಮಹಮ್ಮದ್ ಶರೀಫ್, ಉದ್ಯಮಗಳನ್ನು ತೆರೆಯಲು ಗೊತ್ತಿರುವವರಿಗೆ ಶುಚಿತ್ವ ಪರಿಪಾಲನೆ ಅರಿಯುದಿಲ್ಲವೇ ಆರೋಗ್ಯ ಇಲಾಖೆಯೊಂದು ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿದೆಯಾದರೂ ಇದುವರೆಗೆ ಶುಚಿತ್ವ ಪರಿಪಾಲಿಸದ ಉದ್ಯಮಗಳಿಗೆ ಎಷ್ಟು ಸಲ ನೋಟಿಸ್ ನೀಡಿದೆ. ದಂಡ ವಸೂಲಿಗೆ ಮುಂದಾಗಿದೆ ಎಂಬ ವಿವರ ನೀಡುವಂತೆ ಪಟ್ಟುಹಿಡಿದರು.
ಪ್ರತಿಪಕ್ಷ ನಾಯಕ ಪ್ರಕಾಶ್ರಾವ್ ಮಾತಾನಾಡಿ, ಕೇವಲ ಹೊಟೇಲ್ ಉದ್ಯಮಿಗಳು ಮಾತ್ರವಲ್ಲದೇ ಕೋಳಿ ತ್ಯಾಜ್ಯವನ್ನು ಪುಲ್ಕೇರಿ ಬೈಪಾಸ್ನಿಂದ ಕರಿಯಕಲ್ಲುವರೆಗಿನ ರಸ್ತೆ ಇಕ್ಕೆಲೆಗಳಲ್ಲಿ ಎಸೆಯುತ್ತಿರುವುದು ಗಬ್ಬುನಾತಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.
ಹಿರಿಯಂಗಡಿ ಪರಿಸರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಶೆಡ್ನಲ್ಲಿರುವ ಪಂಪ್ಸೆಟ್ ನಾಪತ್ತೆಯಾಗಿದೆ. ಈ ಬಗ್ಗೆ ಪುರಸಭಾ ಎಂಜಿನಿಯರ್ನಲ್ಲಿ ವಿಚಾರಿಸಿದಾಗ ದುರಸ್ತಿ ಪಡಿಸಲು ಕೊಂಡುಹೋಗಲಾಗಿದೆ ಎಂಬ ಉತ್ತರ ಎರಡು ತಿಂಗಳ ಹಿಂದೆ ದೊರಕಿದ್ದು, ಇನ್ನೂ ವಾಪಸ್ ಬಂದಿಲ್ಲ ಎಂದು ದೂರಿದ ಪ್ರತಿಪಕ್ಷ ಸದಸ್ಯ ಸುನಿಲ್ ಕುಂಟಲ್ಪಾಡಿ, ಯೋಗೀಶ್ ದೇವಾಡಿಗ ಸ್ಥಳದಲ್ಲೇ ಧರಣಿ ನಡೆಸಿದರು.
ಫೆಬ್ರವರಿ 1ರೊಳಗಾಗಿ ಶೆಡ್ನಲ್ಲಿದ್ದ ಪಂಪ್ ಯಥಾರೂಪದಲ್ಲಿ ಇರಬೇಕು ಎಂದರು. ಅದಕ್ಕೆ ಎಂಜಿನಿಯರ್ ಒಪ್ಪಿಗೆ ನೀಡಿರುವುದರಿಂದ ಪ್ರಕರಣ ಸುಖಾಂತ್ಯಗೊಂಡಿತು.
ಲೈಟ್ ಕಂಬದಲ್ಲಿ ನಂಬರ್ ಇಲ್ಲ. ನಾಮಫಲಕ ಹೆಸರಿಲ್ಲ. ಸಿಬ್ಬಂದಿಗೆ ಸಂಬಳವಿಲ್ಲ. ಮೂಲ ಸೌಕರ್ಯ ನೀಡಲು ಆಡಳಿತ ವರ್ಗಕ್ಕೆ ಗೊತ್ತೇ ಇಲ್ಲ ಎಂದು ಪ್ರತಿಪಕ್ಷ ನಾಯಕ ಪ್ರಕಾಶ್ ರಾವ್ ಆರೋಪಿಸಿದರು.
ಇದಕ್ಕೆ ಉತ್ತರಿಸಿದ ಪುರಸಭಾ ಮೂಖ್ಯಾಧಿಕಾರಿ ಮೇಬಲ್ ಡಿ' ಸೋಜಾ, ಪಂಪ್ ಅಪರೇಟರ್ಗಳು ನಿರ್ದಿಷ್ಟ ಸಂಖ್ಯೆಗಿಂತ ಅಧಿಕ ಸಂಖ್ಯೆಯಲ್ಲಿ ಇದ್ದಾರೆ. ವಿವಿಧ ಯೋಜನೆಯಡಿಯಲ್ಲಿ ಈವರೆಗೆ ಅವರಿಗೆ ಸಂಬಳ ನೀಡಲಾಗುತಿತ್ತು. ಅದಕ್ಕೆ ಪ್ರಸ್ತುತ ದಿನಗಳಲ್ಲಿ ಅವಕಾಶವವಿಲ್ಲ ಎಂದು ಉತ್ತರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಅಧ್ಯಕ್ಷ ಎನ್.ಆರ್. ಸುಭೀತ್ ಕುಮಾರ್, ದುಡಿದ ಕೈಗಳಿಗೆ ಸಂಬಳ ನೀಡುವ ಕಾರ್ಯ ಮೊದಲಿಗೆ ನಡೆಯಲಿ. ಅವರನ್ನು ಕೆಲಸದಲ್ಲಿ ಇಡುವುದು ಬಿಡುವ ನಿರ್ಧಾರ ನಂತರ ಕೈಗೊಳ್ಳುವ ಎಂಬ ಸಲಹೆ ನೀಡಿದರು.
ರಜಾದಿನಗಳಲ್ಲಿ ಇಂಟರ್ನೆಟ್ ಬಳಕೆ ಮಾಡಿರುವುದರಿಂದ ಪುರಸಭಾ ಬೊಕ್ಕಸಕ್ಕೆ ನಷ್ಟವಾಗಿದೆ. ಇದರ ಹೊಣೆಯನ್ನು ಗುತ್ತಿಗೆದಾರ ಮೇಲೆ ಹಾಕಬೇಕು ಎಂದು ಕಳೆದ ಸಾಮಾನ್ಯ ಸಭೆಯಲ್ಲಿ ಸೂಚಿಸಿದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆಡಳಿತ ಪಕ್ಷದ ಸದಸ್ಯ ಅಶ್ಫಕ್ ಅಹಮ್ಮದ್ ಸಭೆಯ ಗಮನಕ್ಕೆ ತಂದರು.
ಸಭೆಯಲ್ಲಿ ಉಪಾಧ್ಯಕ್ಷೆ ಶಶಿಕಲಾ ರಾಣೆ, ಸ್ಥಾಯಿ ಸಮಿತಿ ಅಧ್ಯಕ್ಷ ವಿನ್ನಿ ಬೋಲ್ಡ್ ಮೆಂಡೋನ್ಸಾ, ಇತರರು ಇದ್ದರು.