ಸುಜಾ ಕುಶಾಲಪ್ಪ ಮೇಲೆ ಗುಂಡಿನ ದಾಳಿಗೆ ಖಂಡನೆ
ಮಡಿಕೇರಿ: ಬಿಜೆಪಿ ಜಿಲ್ಲಾಧ್ಯಕ್ಷ ಸುಜಾಕುಶಾಲಪ್ಪ ಮೇಲೆ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಘಟನೆ ಖಂಡಿಸಿರುವ ಹಿಂದೂ ಜಾಗರಣಾ ವೇದಿಕೆ ಪ್ರಮುಖರು, ಕೃತ್ಯದ ನೈಜ ಆರೋಪಿಗಳನ್ನು ಪತ್ತೆ ಮಾಡಲು ಆಗ್ರಹಿಸಿರುವ ಜಿಲ್ಲಾ ಬಿಜೆಪಿಯ ಎಲ್ಲಾ ರೀತಿಯ ಹೋರಾಟ ಮತ್ತು ಪ್ರತಿಭಟನೆಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ರಾಯ್ತುಮ್ಮಯ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷರನ್ನು ಹತ್ಯೆ ಮಾಡಲು ಯತ್ನಿಸಿರುವ ಕೃತ್ಯದ ಹಿನ್ನೆಲೆಯಲ್ಲಿ, ಮುಸ್ಲಿಂ ಮೂಲಭೂತವಾದಿಗಳ ಕೈವಾಡವಿದ್ದು ಕೇರಳ ರಾಜ್ಯದ ಮಾದರಿಯಲ್ಲಿಯೇ ಕೊಡಗು ಜಿಲ್ಲೆಯಲ್ಲಿಯೂ ಹಿಂದೂ ಮುಖಂಡರನ್ನು ಹತ್ಯೆ ಮಾಡುವ ಸಂಚು ನಡೆದಿದೆ ಎಂದು ಆರೋಪಿಸಿದರು. ಮುಸ್ಲಿಂ ಮೂಲಭೂತವಾದಿಗಳ ಗುಂಪನ್ನು ಜಿಲ್ಲಾಡಳಿತ ಪತ್ತೆ ಮಾಡಿ ಬಗ್ಗು ಬಡಿಯಲು ಮುಂದಾಗಬೇಕು ಎಂದು ಒತ್ತಾಯಿಸಿದ ರಾಯ್ ತಮ್ಮಯ್ಯ, ಇಲ್ಲವಾದಲ್ಲಿ ರಸ್ತೆಗಿಳಿದು ಹೋರಾಟ ನಡೆಸಲು ಮುಂದಾಗಲಿದ್ದಾರೆ ಎಂದಿದ್ದಾರೆ.