ಕೋಟೇಶ್ವರ: 25,26ರಂದು ಜಿಲ್ಲಾ ಮಟ್ಟದ ಕೃಷಿ ಉತ್ಸವ
ಉಡುಪಿ: ಕೃಷಿ ಇಲಾಖೆಗೆ 100 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೃಷಿ ಉತ್ಸವ ಆಯೋಜಿಸುತ್ತಿದ್ದು, ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಕೃಷಿಕರಿರುವ ಕುಂದಾಪುರ ತಾಲೂಕಿನ ಕೋಟೇಶ್ವರದ ಸರ್ಕಾರಿ ಪದವಿ ಕಾಲೇಜು ಮೈದಾನದಲ್ಲಿ 25 ಮತ್ತು 26ರಂದು ಕೃಷಿ ಉತ್ಸವ ಆಯೋಜಿಸಲಾಗಿದೆ ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಉತ್ಸವವನ್ನು ಕೃಷಿ ಸಚಿವ ಕೃಷ್ಣ ಬೈರೇಗೌಡ ಉದ್ಘಾಟಿಸುರುವರು.
ಕೃಷಿ ಉತ್ಸವದಲ್ಲಿ ಬೃಹತ್ ಫಲಪುಷ್ಪ ಪ್ರದರ್ಶನ, ಕೃಷಿಕರಿಗೆ ಮಾಹಿತಿ ಮತ್ತು ಖರೀದಿಗೆ ಅವಕಾಶಗಳಿರುವ ವಸ್ತುಪ್ರದರ್ಶನ, ಆಧುನಿಕ ಕೃಷಿ ಉಪಕರಣಗಳ ಪ್ರದರ್ಶನ, ಗ್ರಾಮೀಣ ಅಭಿವೃದ್ಧಿ ವಿಚಾರಗಳಿಗೆ ಸಂಬಂಧಪಟ್ಟಂತೆ ಚಲನಚಿತ್ರಪ್ರದರ್ಶನ, ಗ್ರಾಮೀಣ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿದೆ ಎಂದರು.
ಐದು ವಿಚಾರಗೋಷ್ಠಿ: ಈ ಕೃಷಿ ಉತ್ಸವದಲ್ಲಿ ಸಮಗ್ರ ಕೃಷಿ ಪದ್ಧತಿ, ಹೈಟೆಕ್ ಕೃಷಿ ಸೇರಿದಂತೆ ಒಟ್ಟು 5 ವಿಚಾರಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಜಿಲ್ಲೆಯ ವಿವಿದ ಭಾಗಳಿಂದ ಸುಮಾರು 1 ಲಕ್ಷಕ್ಕಿಂತಲೂ ಹೆಚ್ಚಿನ ಜನ ರೈತರು ಬರುವ ನಿರೀಕ್ಷೆ ಇದೆ ಎಂದ ಸಚಿವರು ರೈತರು ಕೃಷಿ ಮೇಳಕ್ಕೆ ಆಗಮಿಸಲು ವಾಹನದ ವ್ಯವಸ್ಥೆ ಮಾಡಲಾಗುವುದು ಹಾಗೂ ಕೃಷಿಕರಿಗೆ ವಿವಿಧ ಮಾಹಿತಿ ನೀಡಿಲು 200 ಮಳಿಗೆಗಳನ್ನು ಸ್ಥಾಪಿಸಲಾಗುವುದು ಎಂದರು. ಜಿ.ಪಂ. ಅಧ್ಯಕ್ಷ ಉಪೇಂದ್ರ ನಾಯಕ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ಚಂದ್ರ ಶೆಟ್ಟಿ, ಉಪಾಧ್ಯಕ್ಷೆ ಮಮತಾ, ತಾ.ಪಂ. ಅಧ್ಯಕ್ಷೆ ಗೌರಿ ವಿ. ಪೂಜಾರಿ, ಜಿ.ಪಂ. ಸದಸ್ಯರಾದ ಗಣಪತಿ ಶ್ರೀಯಾನ್, ಅರುಣ್ ಶೆಟ್ಟಿ ಇದ್ದರು.