ಪಕ್ಷ ಸಂಘಟನೆ ಕಠಿಣ ಸವಾಲು; ದೇವಿಪ್ರಸಾದ್ ಶೆಟ್ಟಿ
ಉಡುಪಿ: ಜಿಲ್ಲೆಯಲ್ಲಿ ಜೆಡಿಎಸ್ನ್ನು ತಳಮಟ್ಟದಲ್ಲಿ ಸಂಘಟಿಸುವುದು ನಮ್ಮ ಪಾಲಿಗೆ ಕಠಿಣ ಸವಾಲಾಗಿದ್ದು ಇದನ್ನು ಯಶಸ್ವಿಯಾಗಿ ನಿಭಾಯಿಸಲು ಪಕ್ಷದಲ್ಲಿ ಪ್ರಾಮಾಣಿಕ ಕಾರ್ಯಕರ್ತರ ಪಡೆ ರಚಿಸಿ ಪಕ್ಷ ಜಿಲ್ಲೆಯ ನಾಯಕರ ಸಹಕಾರದಿಂದ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ಗೆ ಪರ್ಯಾಯ ಶಕ್ತಿಯನ್ನಾಗಿ ರೂಪಿಸಲು ಪಣ ತೊಡುವುದಾಗಿ ಉಡುಪಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ. ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ ಪುನರಾಯ್ಕೆಯಾಗಿರುವ ಅವರು ಇತ್ತೀಚೆಗೆ ಪಕ್ಷದ ಕಚೇರಿಯಲ್ಲಿ ಅಧಿಕಾರಗ್ರಹಣ ನಡೆಸಿ ಮಾತನಾಡಿದರು. ಪಕ್ಷ ನೀಡಿರುವ ಮಹತ್ತರ ಜವಾಬ್ದಾರಿಯನ್ನು ನಿಭಾಯಿಸಲು ಕಠಿಣ ಪರಿಶ್ರಮ ಪಡಬೇಕಾಗಿದ್ದು, ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಪಕ್ಷದ ಜಿಲ್ಲಾ ನಾಯಕರಿಗೆ ಜವಾಬ್ದಾರಿ ನೀಡಲಾಗಿದೆ. ಜಿಲ್ಲಾ ಸಮಿತಿ, ಕ್ಷೇತ್ರ ಸಮಿತಿ ಮತ್ತು ಎಲ್ಲಾ ಘಟಕಗಳನ್ನು ನಾಯಕರ ಸೂಚನೆಯಂತೆ ನೇಮಕ ಮಾಡಲಿದ್ದು, ಸಾಮೂಹಿಕ ನಾಯಕತ್ವದಡಿ ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲಾಗುವುದೆಂದು ಹೇಳಿದರು.