ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಎಂಡೋ ಪೀಡಿತ ಕೊಕ್ಕಡ ಪರಿಸರ: ಕೈಪಂಪ್‌ನಲ್ಲಿ ಕೀಟನಾಶಕ ಸಿಂಪಡಣೆ

Mainashree
Updated On : 23 Jan 2014, 12:37 pm

ಉಪ್ಪಿನಂಗಡಿ: ಎರಡು ದಶಕಗಳ ಹಿಂದೆ ಗೇರು ಕೃಷಿ ಇಳುವರಿ ರಕ್ಷಣೆಗಾಗಿ ವೈಮಾನಿಕವಾಗಿ ಸಿಂಪಡಿಸಲಾಗಿದ್ದ ಎಂಡೋ ದ್ರಾವಣದಿಂದ ಬದುಕನ್ನು ನರಕ ಸದೃಶವನ್ನಾಗಿ ಅನುಭವಿಸುತ್ತಿರುವ ಕೊಕ್ಕಡ ಹಾಗೂ ಸುತ್ತಲ ಗ್ರಾಮಸ್ಥರು ಇದೀಗ ಕೈ ಪಂಪು ಮೂಲಕ ಸಿಂಪಡಿಸಲಾಗುವ ಕೀಟನಾಶಕದಿಂದ ಏನಾದರೂ ಅಡ್ಡ ಪರಿಣಾಮವಾದೀತೆ ಎಂಬ ಭೀತಿ ವ್ಯಕ್ತಪಡಿಸುತ್ತಿದ್ದಾರೆ.
ಗೇರು ಮರದಲ್ಲಿ ಹೂವು ಬಿಡುವ ಈ ವೇಳೆಯಲ್ಲಿ ಬಾಧಿಸುವ ಕೀಟ ಬಾಧೆ ತಡೆಗಟ್ಟಲು ಗೇರು ತೋಟಗಳನ್ನು ಗುತ್ತಿಗೆ ಪಡೆದುಕೊಂಡ ಗುತ್ತಿಗೆದಾರರು ಮರಗಳಿಗೆ ಹೊಸ ಬಗೆಯ ಕೀಟನಾಶಕಗಳನ್ನು ಕೈ ಪಂಪುಗಳ ಸಹಾಯದಿಂದ ಸಿಂಪಡಿಸುತ್ತಿದ್ದಾರೆ. ಇದು ವೈಮಾನಿಕವಾಗಿ ಸಿಂಪಡಿಸುವ ಕ್ರಮದಷ್ಟೂ ವಿಶಾಲ ವ್ಯಾಪ್ತಿಯಲ್ಲಿ ಪ್ರಸರಿಸದಿದ್ದರೂ, ಗಾಳಿಯಲ್ಲಿ ಬೆರೆತು ಜನವಸತಿ ಪ್ರದೇಶದಲ್ಲಿ ವ್ಯಾಪಿಸಿ, ಮತ್ತೆ ಬದುಕು ಬರಡು ಮಾಡಬಹುದೇ ಎಂಬ ಭೀತಿಯನ್ನು ನಾಗರಿಕರಲ್ಲಿ ತಂದಿದೆ.
ಅಡ್ಡ ಪರಿಣಾಮವಿಲ್ಲ: ಈ ಬಗ್ಗೆ ರಾಜ್ಯ ಗೇರು ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಪ್ರಸಕ್ತ ಸಿಂಪಡಿಸುತ್ತಿರುವ ಕೀಟ ನಾಶಕ ಯಾವುದೇ ಅಡ್ಡ ಪರಿಣಾಮ ನೀಡುವಂತದ್ದಲ್ಲ ಎಂದು ರಾಷ್ಟ್ರೀಯ ಪ್ರಯೋಗಾಲಯದ ಅಧಿಕಾರಿಗಳು ಪ್ರಮಾಣಪತ್ರ ನೀಡಿದ್ದಾರೆ ಎಂದು ತಿಳಿಸುತ್ತಿದ್ದಾರೆ ಎನ್ನಲಾಗಿದೆ.
ಸಾಧಕ-ಬಾಧಕ ತಿಳಿಸಿ:  ಎಂಡೋ ಸಿಂಪಡಿಸುವಿಕೆಯ ದುಷ್ಪಲ ಅನುಭವಿಸುತ್ತಿರುವ ಇಲ್ಲಿನ ಜನತೆಗೆ ಕೀಟನಾಶಕದ ಯಾವುದೇ ಡಬ್ಬವನ್ನೂ ಕಂಡರೂ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಅಂದು ಯಾವುದೇ ಅಡ್ಡ ಪರಿಣಾಮವಿಲ್ಲ ಎಂದು ಪ್ರಚುರ ಪಡಿಸಿ ವೈಮಾನಿಕವಾಗಿ ಎಂಡೋ ಸಿಂಪಡಿಸಿ ನಮ್ಮ ಬದುಕು ಕಿತ್ತುಕೊಂಡ ಸರ್ಕಾರ ಇದೀಗ ಮತ್ತೊಮ್ಮೆ ಆರ್ಥಿಕ ಲಾಭದ ಆಸೆಗಾಗಿ ಮತ್ತೆ ಹೊಸ ರೂಪದ ಅಪಾಯಕಾರಿ ಕೀಟನಾಶಕ ತಂದಿರುವ ಸಾಧ್ಯತೆಯೇ ಹೆಚ್ಚಿದೆ. ಈ ಕಾರಣಕ್ಕಾಗಿ ಬಳಕೆಯಾಗುತ್ತಿರುವ ಕೀಟನಾಶಕದ ವೈಜ್ಞಾನಿಕ ಸಾಧಕ-ಬಾಧಕಗಳನ್ನು ಜನತೆ ತಿಳಿಯಪಡಿಸಬೇಕು. ತನ್ಮೂಲಕ ಜನತೆಯ ಭೀತಿ ನಿವಾರಿಸಬೇಕು ಎಂದು ಎಂಡೋ ಸಂತ್ರಸ್ತರ ಹೋರಾಟ ಸಮಿತಿ ಮುಂದಾಳು ಶ್ರೀಧರ ಗೌಡ ಅಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement