ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

25,26: ಕೇರಳ ರಾಜ್ಯ 6ನೇ ಕನ್ನಡ ಸಮ್ಮೇಳನ

Mainashree
Updated On : 24 Jan 2014, 11:06 am

ಮಂಗಳೂರು: ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಜ. 25 ಮತ್ತು 26 ರಂದು ಮೀಪುಗುರಿ ಪಾರಕಟ್ಟೆಯ ಕನ್ನಡ ಗ್ರಾಮದಲ್ಲಿ 'ಕೇರಳ ರಾಜ್ಯ 6ನೇ ಕನ್ನಡ ಸಮ್ಮೇಳನ ನಡೆಯಲಿದೆ.
 ಜ. 25 ರಂದು ಬೆಳಗ್ಗೆ 10 ಗಂಟೆಗೆ ಸಮ್ಮೇಳನವನ್ನು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಉದ್ಘಾಟಿಸುವರು. ಸಮ್ಮೇಳನ ಅಧ್ಯಕ್ಷತೆಯನ್ನು ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ವಹಿಸುವರು. ಕೇರಳ ಕರ್ನಾಟಕ ಉತ್ಸವವನ್ನು ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಉದ್ಘಾಟಿಸುವರು ಎಂದು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಶಿವರಾಮ  ಕಾಸರಗೋಡು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
 ಇದೇ ಸಂದರ್ಭ ಶತಮಾನ ಕಂಡ ಶ್ರೇಷ್ಠ ಕವಿ ನಾಡೋಜ ಡಾ. ಕಯ್ಯಾರ ಕಿಂಞಣ್ಣ ರೈ ಅವರ 100ನೇ ವರ್ಷಾಚರಣೆ-ಸಾಹಿತ್ಯೋತ್ಸವವನ್ನು ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ ಉದ್ಘಾಟಿಸುವರು.
ಕಯ್ಯಾರರಿಗೆ ಪೌರ ಸನ್ಮಾನ ನಡೆಸಲಾಗುವುದು. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಕನ್ನಡ ಗ್ರಾಮ ಸಮುಚ್ಚಯ, ಕೃಷಿ ಕುಟೀರ ಹಾಗೂ ಕನ್ನಡ ಗ್ರಾಮ ರಸ್ತೆ ಮತ್ತು ಬಯಲು ರಂಗಮಂದಿರವನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸುವರು. ಆರೋಗ್ಯ ಸಚಿವ ಯು.ಟಿ. ಖಾದರ್, ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಪಾಲ್ಗೊಳ್ಳುವರು ಎಂದರು.
 ಕಲಾ ಪ್ರದರ್ಶನ, ಪುಸ್ತಕ, ವಸ್ತು ಪ್ರದರ್ಶನ ಉದ್ಘಾಟನೆ ಹಾಗೂ ಹೊಸ ಕೃತಿ, ಸ್ಮರಣ ಸಂಚಿಕೆ ಬಿಡುಗಡೆಗೊಳ್ಳಲಿದೆ. ವಿಚಾರಗೋಷ್ಠಿ, ಭಾಷಾ ಸೌಹಾರ್ದ ಗೋಷ್ಠಿ, ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ.
 ಜ. 26 ರಂದು ಬೆಳಗ್ಗೆ 10ಕ್ಕೆ ಕನ್ನಡಕ್ಕೆ ವೈದ್ಯ ಸಾಹಿತ್ಯದ ಕೊಡುಗೆ ಎಂಬ ವಿಷಯದಲ್ಲಿ ವಿಚಾರಗೋಷ್ಠಿ ನಡೆಯಲಿದೆ.
ಬೆಂಗಳೂರು ವೈದ್ಯಲೋಕ ಆರೋಗ್ಯ ಮಾಸಪತ್ರಿಕೆ ಸಂಪಾದಕಿ ಡಾ. ವಸುಂಧರಾ ಭೂಪತಿ ಅಧ್ಯಕ್ಷತೆ ವಹಿಸುವರು. ಗಡಿನಾಡು, ಹೊರನಾಡು, ಅನಿವಾಸಿ ಕನ್ನಡಿಗರು, ಕನ್ನಡ ಸಂಘಟನೆಗಳ ಪಾತ್ರ ಕುರಿತು ರಾಷ್ಟ್ರೀಯ ವಿಚಾರಗೋಷ್ಠಿ ನಡೆಯಲಿದೆ.  
 ಸಂಜೆ 4ಕ್ಕೆ ಸಮಾರೋಪದಲ್ಲಿ ಕ್ರೀಡಾ ಸಚಿವ ಅಭಯಚಂದ್ರ ಜೈನ್, ಕೇರಳ ಸರ್ಕಾರ ಗೃಹ ಸಚಿವ ರಮೇಶ್ ಚೆನ್ನಿತ್ತಲ ಪಾಲ್ಗೊಳ್ಳುವರು ಎಂದು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಉಪಾಧ್ಯಕ್ಷ ಎಸ್.ಎಲ್. ಭಾರದ್ವಾಜ್ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement