ಬಿಪಿಎಲ್: ರಾಜ್ಯದಲ್ಲಿ ಉಡುಪಿ ತೃತೀಯ
ಉಡುಪಿ: ಸಾಕಷ್ಟು ಉತ್ತಮ ಜೀವನ ಮಟ್ಟ, ತಲಾದಾಯ, ಶಿಕ್ಷಣ ಹೊಂದಿರುವ ಉಡುಪಿ ಜಿಲ್ಲೆ ಬಿಪಿಎಲ್ ಪಡಿತರ ಕಾರ್ಡು ಹೊಂದಿರುವ ರಾಜ್ಯದ ಜಿಲ್ಲೆಗಳ ಪೈಕಿ 3ನೇ ಸ್ಥಾನದಲ್ಲಿದೆ.
ತಾಲೂಕು ಪಂಚಾಯಿತಿ ಸಭೆಯಲ್ಲಿ ಮಂಗಳವಾರ ಪಡಿತರ ಚೀಟಿಗಳ ಸಮಸ್ಯೆ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಆಹಾರ ಇಲಾಖೆಯ ಉಪತಹಸೀಲ್ದಾರ ಸದಾಶಿವ ಶೆಟ್ಟಿ ಈ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಸುಮಾರು 25 ಸಾವಿರ ಬಿಪಿಎಲ್ ಕಾರ್ಡ್‌ಗಳನ್ನು ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಾ.ಪಂ. ಮಾಜಿ ಅಧ್ಯಕ್ಷ ದೇವದಾಸ ಹೆಬ್ಬಾರ್, ಉಡುಪಿ ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್‌ದಾರರ ಸಂಖ್ಯೆ ಜಾಸ್ತಿಯಾಗಿದೆ ಎಂದರೆ ಇಲ್ಲಿ ಬಡವರ ಸಂಖ್ಯೆ ಕೂಡ ಅಧಿಕವಾಗಿದೆ ಎಂದರ್ಥ. ಇದು ಸಂತೋಷದ ವಿಷಯ ಅಲ್ಲ. ಈ ಬಗ್ಗೆ ಗಂಭೀರ ಚರ್ಚೆ ಆಗಬೇಕಿದೆ, ಕೆಲವು ತಾವು ಬಡವರೆಂದು ಸುಳ್ಳು ಹೇಳಿ ಬಿಪಿಎಲ್ ಕಾರ್ಡು ಪಡೆದಿದ್ದಾರೆಯೇ ಎಂಬ ಸಂಶಯಕ್ಕೂ ಇದು ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.
ಭೂಮಿ ಅತಿಕ್ರಮಣ, ಮನೆ ಅಕ್ರಮ: ಪಡುಬೆಳ್ಳೆ ಎಂಬಲ್ಲಿನ ಸರ್ಕಾರಿ ಜಮೀನಿನಲ್ಲಿ ಸರಿಯಾದ ದಾಖಲೆಗಳಿಲ್ಲದೆ ಮನೆ ಕಟ್ಟುವುದಕ್ಕೆ ಸ್ಥಳೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನುಮತಿ ನೀಡಿರುವ ಬಗ್ಗೆ ಪ್ರಸ್ತಾಪಿಸಿದ ದೇವದಾಸ್ ಹೆಬ್ಬಾರ್, ಈ ಬಗ್ಗೆ ತಹಸೀಲ್ದಾರರಿಗೆ ಪತ್ರ ಬರೆದಿದ್ದರೂ ಇದುವರೆಗೂ ಪಿಡಿಒ ಮೇಲೆ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಈ ಮಹಿಳೆ ಇಲ್ಲಿ ಭೂಮಿ ಅತಿಕ್ರಮಣ ಮಾಡಿ ಅಕ್ರಮವಾಗಿ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಹಲವಾರು ವರ್ಷಗಳಿಂದ ಅಲ್ಲಿಯೇ ವಾಸವಾಗಿರುವುದಾಗಿ ಮಹಿಳೆಯೇ ಒಪ್ಪಿಕೊಳ್ಳುತ್ತಾರೆ. ಗ್ರಾ.ಪಂ.ಗೆ ಮನೆ ತೆರಿಗೆ ಕಟ್ಟಿರುವ ರಶೀದಿಗಳನ್ನು ತೋರಿಸಿದ್ದಾರೆ. ಆದರೆ, ಭೂಮಿ ಮಾತ್ರ ಅವರಿಗೆ ಮಂಜೂರಾಗಿಲ್ಲ. ಈ ಬಗ್ಗೆ ಪ್ರಶ್ನಿಸಿದ ಬೆಳ್ಳೆ ಗ್ರಾ.ಪಂ. ಅಧ್ಯಕ್ಷರಿಗೆ ಬೆದರಿಕೆ ಕರೆಗಳು ಕೂಡ ಬಂದಿವೆ. ಆದರೆ, ಮನೆ ಕಟ್ಟುವುದಕ್ಕೆ ಅನುಮತಿ ನೀಡಿರುವ ಪಿಡಿಒ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿ.ಪಂ. ಅಧ್ಯಕ್ಷ ಉಪೇಂದ್ರ ನಾಯಕ್, ಈಗಾಗಲೇ ಪಿಡಿಒ ಅಧಿಕಾರಿ ಬಗ್ಗೆ ಹಲವಾರು ದೂರುಗಳು ಬಂದಿದ್ದರೂ ಕೂಡ ಯಾಕೆ ಕ್ರಮ ಕೈಗೊಂಡಿಲ್ಲ? ಅಂತಹ ಪಿಡಿಒ ಅವರನ್ನು ರಕ್ಷಿಸುವ ಅಗತ್ಯವಾದರೂ ಏನಿದೆ? ಎಂದು ಪ್ರಶ್ನಿಸಿದರಲ್ಲದೇ, ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಸ್ಪಷ್ಟೀಕರಣ ನೀಡಿದ ತಹಸೀಲ್ದಾರ ಟಿ.ಜೆ. ಗುರುಪ್ರಸಾದ್, ಈ ಪಿಡಿಒ ಬಗ್ಗೆ ಈಗಾಗಲೇ ತನಿಖೆ ಆರಂಭಿಸಲಾಗಿದೆ. ತನಿಖೆಯ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹ ಮಾಡಿ ಮುಂದಿನ ಸಭೆಯಲ್ಲಿ ತಿಳಿಸಲಾಗುವುದು. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಜನಪ್ರತಿನಿಧಿಗಳಿಲ್ಲದೇ ಉದ್ಘಾಟನೆ: ಬ್ರಹ್ಮಾವರ ಕುಂಜಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರೂರು ಕೀರ್ತಿ ನಗರದಲ್ಲಿನ ಅಂಗನವಾಡಿ ಕೇಂದ್ರವನ್ನು ಜನಪ್ರತಿನಿಧಿಗಳನ್ನು ಕರೆಸದೆ ಅಂಗನವಾಡಿ ಶಿಕ್ಷಕಿ ಉದ್ಘಾಟನೆ ಮಾಡಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟೀಕರಣ ನೀಡಬೇಕು ಎಂದು ಉಮೇಶ್ ನಾಯ್ಕ್ ಹೇಳಿದರು.
ಈ ಬಗ್ಗೆ ಉತ್ತರಿಸಿದ ಶಿಶು ಕಲ್ಯಾಣ ಅಭಿವೃದ್ಧಿ ಯೋಜನಾಧಿಕಾರಿ ಸದಾನಂದ ನಾಯಕ್, ಸುವರ್ಣ ಗ್ರಾಮ ಯೋಜನೆಯಡಿ ನಿರ್ಮಿತವಾದ ಅಂಗನವಾಡಿ ಕೇಂದ್ರವನ್ನು ಇನ್ನೂ ಇಲಾಖೆಗೆ ಹಸ್ತಾಂತರ ಮಾಡಿಲ್ಲ. ಇಲಾಖೆಯ ಗಮನಕ್ಕೆ ತರದೆಯೇ ಉದ್ಘಾಟನೆ ಮಾಡಲಾಗಿದ್ದು, ಈ ಬಗ್ಗೆ ಶಿಕ್ಷಕಿಗೆ ನೋಟೀಸ್ ನೀಡಲಾಗಿದೆ. ಅಲ್ಲದೆ ಶಿಕ್ಷಕಿಯನ್ನು ಸಮೀಪದಲ್ಲಿರುವ ಬೇರೊಂದು ಅಂಗನವಾಡಿ ಕೇಂದ್ರಕ್ಕೆ ವರ್ಗಾಯಿಸಲಾಗಿದೆ ಎಂದರು.
ತಾ.ಪಂ. ಅಧ್ಯಕ್ಷೆ ಗೌರಿ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಉಪಾದ್ಯಕ್ಷ ರಾಮ ಕುಲಾಲ್, ತಾ.ಪಂ. ಇಒ ಮಂಜುನಾಥಯ್ಯ, ತಾ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ದಿವಾಕರ ಹೆಗ್ಡೆ ಇದ್ದರು.