ಉಡುಪಿ ಧರ್ಮಪ್ರಾಂತ್ಯದ ಮುಖವಾಣಿ ಉಜ್ವಾಡ್ ಬಿಡುಗಡೆ
ಉಡುಪಿ: ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ಅಧಿಕೃತ ಮಾಸ ಪತ್ರಿಕೆ 'ಉಜ್ವಾಡ್'ನ್ನು ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ ಮಂಗಳವಾರ ಅತ್ತೂರಿನ ಸೈಂಟ್ ಲಾರೆನ್ಸ್ ಚರ್ಚ್‌ನಲ್ಲಿ ವಾರ್ಷಿಕ ಹಬ್ಬದ ಸಂದರ್ಭ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ಪವಿತ್ರ ಕೆಥೋಲಿಕ್ ಧರ್ಮಸಭೆಯ ಮಾರ್ಗದರ್ಶನದಂತೆ ಪ್ರತಿಯೊಂದು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು, ತನ್ನ ಪ್ರಾಂತ್ಯದ ಸಂಪನ್ಮೂಲಗಳನ್ನು ಉಪಯೋಗಿಸುವುದರೊಂದಿಗೆ ಇತರ ಕಡೆಗಳಿಂದ ಸಂಪನ್ಮೂಲಗಳನ್ನು ಒಗ್ಗೂಡಿಸಿ ಧರ್ಮಪ್ರಾಂತ್ಯದಲ್ಲಿ ಮಾಧ್ಯಮಗಳನ್ನು ಆರಂಭಿಸುವುದರೊಂದಿಗೆ ಅವುಗಳ ಸಂಪೂರ್ಣ ಉಪಯೋಗ ಪಡೆಯಬೇಕು. ಅದರಂತೆ ಹೊಸದಾಗಿ ನಿರ್ಮಾಣಗೊಂಡ ಉಡುಪಿ ಧರ್ಮಪ್ರಾಂತ್ಯದ ಕ್ರೈಸ್ತ ವಿಶ್ವಾಸಿಗಳಿಗೆ ಮಾಹಿತಿ, ಆಧ್ಯಾತ್ಮಿಕ ವಿಚಾರಗಳು, ಧರ್ಮಪ್ರಾಂತ್ಯದ ಯೋಜನೆಗಳ ಮಾಹಿತಿ ಇತ್ಯಾದಿಗಳನ್ನು ನೀಡಲು ಈ 'ಉಜ್ವಾಡ್' ಪತ್ರಿಕೆ ಹೊರತರಲಾಗಿದೆ. ಪತ್ರಿಕೆ ಕೇವಲ ಉಡುಪಿ ಧರ್ಮಪ್ರಾಂತ್ಯಕ್ಕೆ ಸೀಮೀತವಾಗದೆ ವಿಶ್ವಾದ್ಯಂತ ನೆಲೆಸಿದ ಕೊಂಕಣಿ ಭಾಷಿಕ ಒದುಗರಿಗೆ ಉತ್ತಮ ವಿಚಾರಗಳನ್ನು ಒಳಗೊಂಡ, ವಸ್ತುನಿಷ್ಠ ಮಾಹಿತಿ ನೀಡುವ ಕೆಲಸ ಮಾಡಲಿದೆ ಎಂದರು.
ಇದೇ ವೇಳೆ ಉಜ್ವಾಡ್ ಪತ್ರಿಕೆಯ ಪ್ರಧಾನ ಸಂಪಾದಕ ಚೇತನ್ ಲೋಬೊ ಅವರನ್ನು ಧರ್ಮಾಧ್ಯಕ್ಷರು ಸನ್ಮಾನಿಸಿದರು.
ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಡೆನಿಸ್ ಡೆಸಾ, ಕುಲಪತಿ ವಲೇರಿಯನ್ ಮೆಂಡೊನ್ಸಾ, ಅತ್ತೂರು ಚರ್ಚ್ ಧರ್ಮಗುರು ಜಾರ್ಜ್ ಡಿಸೋಜಾ, ನಕ್ರೆ ಚರ್ಚ್ ಧರ್ಮಗುರು ವಿನ್ಸೆಂಟ್ ಕ್ರಾಸ್ತಾ ಇದ್ದರು.