ಉಡುಪಿ: 'ನಿರಂತರ ಜ್ಞಾನ ಯಜ್ಞ'ಕ್ಕೆ ಚಾಲನೆ
ಉಡುಪಿ: ಅನ್ನದಾನಕ್ಕೆ ಪ್ರಸಿದ್ಧವಾದ ಕೃಷ್ಣನ ಸನ್ನಿಧಿಯಲ್ಲಿ ಕೇವಲ ಹೊಟ್ಟೆಗೆ ಮಾತ್ರ ಅನ್ನವನ್ನು ನೀಡಿಲ್ಲ ಬದಲಾಗಿ ಮನಸ್ಸಿಗೆ ಜ್ಞಾನವೆಂಬ ಅನ್ನವನ್ನೂ ಉಣಿಸಿದೆ ಎಂದು ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಹೇಳಿದರು.
ಅವರು ಬುಧವಾರ ಉಡುಪಿ ಶ್ರೀಕೃಷ್ಣ ಮಠ ಮತ್ತು ಪರ್ಯಾಯ ಕಾಣಿಯೂರು ಮಠದ ವತಿಯಿಂದ ರಾಜಾಂಗಣದಲ್ಲಿ ನಡೆಯಲಿರುವ 'ನಿರಂತರ ಜ್ಞಾನ ಯಜ್ಞ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಸಿದ ಮನಸ್ಸಿಗೆ ಸದ್ವಿಚಾರಗಳನ್ನು ನೀಡುವ ಮೂಲಕ ಜನರಲ್ಲಿ ಜ್ಞಾನ ವೃದ್ಧಿಯ ಜೊತೆಗೆ ಸುಸಂಸ್ಕೃತರನ್ನಾಗಿ ಮಾಡುವ ಕಾರ್ಯವನ್ನು ಕೃಷ್ಣನ ಸನ್ನಿಧಾನವು ಮಾಡಿದೆ. ಈ ಹಿನ್ನೆಲೆಯಲ್ಲಿ ರಾಜಾಂಗಣದಲ್ಲಿ ನಿರಂತರವಾಗಿ ವಿವಿಧ ವಿದ್ವಾಂಸರಿಂದ ಪ್ರವಚನಗಳು ನಡೆಯಲಿವೆ ಎಂದರು.
ಮನುಷ್ಯನ ಎಲ್ಲಾ ಸಾಧನೆಗೆ ಮೂಲ ಕಾರಣಿಭೂತವಾಗಿರುವುದು ಜ್ಞಾನ. ಈ ತತ್ವಜ್ಞಾನದ ಪ್ರಚಾರ ನಿರಂತರವಾಗಿ ನಡೆಯಬೇಕು. ಆ ಕೆಲಸವನ್ನು ಇಂದು ಕಾಣಿಯೂರು ಮಠಾಧೀಶರು ನಡೆಸಿಕೊಡುತ್ತಿದ್ದಾರೆ. ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಕರೆ ನೀಡಿದರು.
ಪರ್ಯಾಯ ಶ್ರೀ ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥರು ಮಾತನಾಡಿ, ನಿರ್ಣಯ ಗ್ರಂಥಗಳಲ್ಲಿ ಅತ್ಯಂತ ಶ್ರೇಷ್ಠವಾದ ಮಹಾಭಾರತದ ಗ್ರಂಥದಲ್ಲಿ ಅನೇಕ ವಿಚಾರಗಳು ಇವೆ. ಇದನ್ನು ಜನರು ತಿಳಿದುಕೊಳ್ಳುವಲ್ಲಿ ಮುಂದಾಗಬೇಕು. ಇದಕ್ಕಾಗಿ ತಮ್ಮ ಪರ್ಯಾಯೋತ್ಸವದಲ್ಲಿ ರಾಜಾಂಗಣದಲ್ಲಿ ಮಹಾಭಾರತಕ್ಕೆ ಸಂಬಂಧಿತ ಪ್ರವಚನಗಳು ನಡೆಯಲಿವೆ ಎಂದರು.
ಉಡುಪಿ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲ ಡಾ.ಎಚ್. ಸುರೇಶ್ ಆಚಾರ್ಯ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕಾಣಿಯೂರು ಮಠದ ದಿವಾನರಾದ ರಘುಪತಿ ಆಚಾರ್ಯ ಇದ್ದರು.
ಕಾರ್ಯಕ್ರಮಕ್ಕೂ ರಥಬೀದಿಯಲ್ಲಿ ಮಹಾಭಾರತ ಗ್ರಂಥಗಳನ್ನು ನವರತ್ನ ರಥದಲ್ಲಿರಿಸಿ ಪೂಜೆ ಸಲ್ಲಿಸಿ ಮೆರವಣಿಗೆಯಲ್ಲಿ ರಾಜಾಂಗಣಕ್ಕೆ ತರಲಾಯಿತು.