ಉಡುಪಿ: ಬೃಹತ್ ಉದ್ಯೋಗ ಮೇಳ ಉದ್ಘಾಟನೆ
ಉಡುಪಿ: ಉದ್ಯೋಗ ನೀಡುವ ಕಂಪೆನಿಗಳು ವಿದ್ಯಾರ್ಹತೆ ಜೊತೆಗೆ ಸಾಮಾನ್ಯ ಜ್ಞಾನ, ಉತ್ತಮ ಸಂವಹನ ಕಲೆ, ತ್ವರಿತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ, ಭಾಷಾ ಪ್ರಬುದ್ಧತೆಗಳನ್ನು ಬಯಸುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಶಿಕ್ಷಣದ ಈ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಎಂ.ಟಿ. ರೇಜು ಕರೆ ನೀಡಿದ್ದಾರೆ.
ಬುಧವಾರ ಇಲ್ಲಿನ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಆಯೋಜಿಸಿದ ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಹಿಂದೆ ಉಡುಪಿಯಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಸುಮಾರು 450 ಮಂದಿ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದು, ಅಂತಿಮ ಹಂತಕ್ಕೆ 150 ಮಂದಿ ಆಯ್ಕೆಯಾಗಿ, ಅವರಲ್ಲಿ ಕೇವಲ 34 ಮಂದಿ ಮಾತ್ರ ಉದ್ಯೋಗ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈ ಉದ್ಯೋಗಾರ್ಥಿಗಳಲ್ಲಿ ಶಿಕ್ಷಣದ ಜೊತೆಗೆ ಪೂರಕ ಕೌಶಲ್ಯಗಳು ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಅತಿಥೇಯ ಕಾಲೇಜಿನ ಪ್ರಾಂಶುಪಾಲ ಡಾ. ಮಧುಸೂಧನ ಭಟ್ ಮಾತನಾಡಿ, ಈ ಬಾರಿ 25ಕ್ಕೂ ಹೆಚ್ಚಿನ ಕಂಪೆನಿಗಳು ವಿದ್ಯಾರ್ಥಿಗಳನ್ನು ಅರಸಿಕೊಂಡು ಬಂದಿರುವುದು ಮಾತ್ರವಲ್ಲದೆ, ವಿದ್ಯಾರ್ಥಿಗಳು ಕೂಡ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಈಗಿನಿಂದಲೇ ಚಿಂತನೆ ನಡೆಸುತ್ತಿದ್ದಾರೆ ಎಂಬುದಕ್ಕೆ ಈ ಉದ್ಯೋಗ ಮೇಳ ಸೂಕ್ತ ನಿದರ್ಶನ ಎಂದರು. ಜಿಪಂ ಅಧ್ಯಕ್ಷ ಉಪೇಂದ್ರ ನಾಯಕ್, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಾಧು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ನಾಗೇಶ, ಉದ್ಯೋಗ ವಿನಿಮಯ ಕಚೇರಿ ಅಧಿಕಾರಿ ಬಸವರಾಜ್, ಉದ್ಯಮಿ ಮಹಮ್ಮದ್ ಮೌಲಾನ್, ವೆಸ್ಟರ್ನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ಜಯಕಿಶನ್, ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ ಮುಖ್ಯಸ್ಥ ಇಂದ್ರಾಳಿ ಜಯಕರ ಶೆಟ್ಟಿ ಇದ್ದರು. ವಿ.ಪ್ರಸನ್ನ ಅತಿಥಿಗಳನ್ನು ಸ್ವಾಗತಿಸಿದರು. ಈ ಬೃಹತ್ ಉದ್ಯೋಗ ಮೇಳದಲ್ಲಿ ರೋಬೋಸಾಫ್ಟ್, ಎಂಫಸಿಸ್, ಮಣಿಪಾಲ ಗ್ರೂಫ್, ಕಿರಣ್ ಟೆಕ್ನಾಲಜಿ, ಮಹೀಂದ್ರಾ ಇನ್ನಿತರ ಒಟ್ಟು 20ಕ್ಕೂ ಹೆಚ್ಚಿನ ಕಂಪೆನಿಗಳು ವಿದ್ಯಾರ್ಥಿಗಳ ಸಂದರ್ಶನ ಹಾಗೂ ಆಯ್ಕೆ ಪ್ರಕ್ರಿಯೆಗಳನ್ನು ಸ್ಥಳದಲ್ಲೇ ನಡೆಸಿದವು. ಸುಮಾರು 700ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡರು.