ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಕೃಷ್ಣ ಮಠ ಮತ್ತೆ ಉಗ್ರ ಟಾರ್ಗೆಟ್!

Lingaraj Badiger
Updated On : 30 Jan 2014, 12:56 pm

ಉಡುಪಿ: ಅಷ್ಟ ಮಠಾಧಿಪತಿಗಳ ನಡುವಿನ ಬಿಕ್ಕಟ್ಟಿನಿಂದಾಗಿ ಸದಾ ಸುದ್ದಿಯಲ್ಲಿರುವ ಉಡುಪಿಯ ಕೃಷ್ಣ ಮಠ ಇದೀಗ ಮತ್ತೆ ಉಗ್ರರ ಟಾರ್ಗೆಟ್ ಆಗಿ ಸುದ್ದಿಯಲ್ಲಿದೆ.
 ಇದೇನೂ ಹೊಸ ಸುದ್ದಿಯಲ್ಲ, ಈ ಹಿಂದೆಯೂ ಅನೇಕ ಬಾರಿ ಉಡುಪಿ ಕೃಷ್ಣ ಮಠದ ಮೇಲೆ ಉಗ್ರರ ಕಣ್ಣಿದೆ ಎಂದು ಸುದ್ದಿಯಾಗಿತ್ತು. ಆಗೆಲ್ಲ ಕೃಷ್ಣ ಮಠದಲ್ಲಿ ಮತ್ತು ಭಕ್ತರಲ್ಲಿ ಸಂಚಲನ, ಸಭೆ, ಹೋರಾಟಗಳು ನಡೆದು ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೆಚ್ಚುತ್ತಿತ್ತು. ಪೊಲೀಸ್ ಇಲಾಖೆ ಒಂದಷ್ಟು ದಿನ ಕೃಷ್ಣ ಮಠಕ್ಕೆ ಭದ್ರತೆ ಏರ್ಪಾಡು ಮಾಡುತ್ತಿತ್ತು. ಕೆಲ ದಿನಗಳ ನಂತರ ಅದು ಮರೆತು ಹೋಗುತ್ತಿತ್ತು. ಕೃಷ್ಣ ಮಠದ ಆಗುಹೋಗುಗಳು ಯಥಾಸ್ಥಿತಿಯಲ್ಲಿ ಮುಂದುವರಿಯುತ್ತಿದ್ದವು.
ಮತ್ತೆ ಉಗ್ರರ ಕಣ್ಣು: ಈಗ ಮತ್ತೆ ಸ್ವತಃ ರಾಜ್ಯದ ಗೃಹಸಚಿವ ಕೆ.ಜೆ. ಜಾರ್ಜ್ ಅವರೇ ಕೃಷ್ಣ ಮಠದ ಮೇಲೆ ಉಗ್ರರಿಂದ ಕಣ್ಣಿದೆ ಎಂದು ಹೇಳಿರುವುದರಿಂದ ಮತ್ತೆ ಕೃಷ್ಣಮಠದಲ್ಲಿ ಸಂಚಲನ ಆರಂಭವಾಗಿದೆ.
 2 ವರ್ಷಗಳ ಹಿಂದೆ ಕೃಷ್ಣ ಮಠಕ್ಕೆ ಉಗ್ರರಿಂದ ಅಪಾಯ ಇದೆ ಎಂಬ 'ಗುಮ್ಮ'ನನ್ನು ತೋರಿಸಿ, ಕೃಷ್ಣ ಮಠಕ್ಕೆ ಭದ್ರತೆ ಒದಗಿಸಬೇಕು ಎಂಬ ನೆಪ ಒಡ್ಡಿ ಕೃಷ್ಣನ ರಥಬೀದಿಯಲ್ಲಿ ವ್ಯಾಪಾರ ನಡೆಸಿ ಜೀವನ ಸಾಗಿಸುತ್ತಿದ್ದ ನೂರಾರು ವ್ಯಾಪಾರಿಗಳನ್ನು ಹೊರದೂಡಲಾಗಿತ್ತು ಮತ್ತು ರಥಬೀದಿಯನ್ನು ವಾಹನ ಮುಕ್ತಗೊಳಿಸಿ, ರಥಬೀದಿ ಸೇರುವ 4 ಪ್ರಮುಖ ರಸ್ತೆಗಳಲ್ಲಿ ಆಳೆತ್ತರದ ಗೇಟುಗಳನ್ನು ಅಳವಡಿಸಲಾಗಿದೆ.
ಕನಿಷ್ಠ ಭದ್ರತೆ: ಪೊಲೀಸ್ ಇಲಾಖೆ ಕೃಷ್ಣ ಮಠದ ಪ್ರವೇಶ ದ್ವಾರಗಳಲ್ಲಿ ಮೆಟಲ್ ಡಿಟೆಕ್ಟರ್‌ಗಳನ್ನು ಅಳವಡಿಸಿದೆ. ಮಠದ ಖರ್ಚಿನಲ್ಲಿಯೇ ಆಯಕಟ್ಟಿನ ಸ್ಥಳಗಳಲ್ಲಿ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸುವುದಕ್ಕೆ ಸಲಹೆ ಮಾಡಿದೆ. ಅದರಂತೆ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಆದರೂ ಈಗಲೂ ಕೃಷ್ಣ ಮಠದೊಳಗೆ ಮುಂದಿನ- ಹಿಂದಿನ ದ್ವಾರಗಳಿಂದ ಯಾರು ಬೇಕಾದರೂ ರಾಜರೋಷವಾಗಿ ಹೋಗಿ ಬರಬಹುದು.
 ಕೃಷ್ಣ ಮಠ ಮುಜರಾಯಿ ಇಲಾಖೆಗೆ ಸೇರಿಲ್ಲದಿರುವುದರಿಂದ ಸರ್ಕಾರ ಅದರ ರಕ್ಷಣೆ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುವುದಕ್ಕೂ ಆಗುವುದಿಲ್ಲ. ಕೃಷ್ಣಮಠವೇ ತನ್ನ ರಕ್ಷಣೆಯ ಹೊಣೆಯನ್ನು ಹೊರಬೇಕಾಗುತ್ತದೆ. ಆದರೆ ಅದು ಅಷ್ಟು ಸುಲಭದ ಕೆಲಸವೂ ಅಲ್ಲ.
 ಆದರೂ ಇದೀಗ ಸ್ವತಃ ಗೃಹಸಚಿವರೇ ಕೃಷ್ಣಮಠಕ್ಕೆ ಅಪಾಯ ಇರುವುದನ್ನು ಹೇಳಿರುವುದರಿಂದ ಸರ್ಕಾರ ಮುಂದೇನು ಕ್ರಮ ಕೈಗೊಳ್ಳುತ್ತದೆ, ಕಾದು ನೋಡಬೇಕಾಗಿದೆ.

ನಕಲಿ ಉಗ್ರ ಮಠ ಸೇರಿದ್ದ..!
ಉಗ್ರರ ದಾಳಿ ಮುಂತಾದ ತುರ್ತು ಸಂದರ್ಭಗಳಲ್ಲಿ ಪೊಲೀಸ್ ಇಲಾಖೆ ಹೇಗೆ ಕಾರ್ಯಾಚರಿಸಬೇಕು ಎಂಬುದನ್ನು ಪ್ರಾಯೋಗಿಕವಾಗಿ ತರಬೇತಿ ನೀಡುವುದಕ್ಕಾಗಿ ಪ್ರತಿ ವರ್ಷ ಉಡುಪಿಯಲ್ಲಿ ನಕಲಿ ಕಾರ್ಯಾಚರಣೆಗಳನ್ನು ನಡೆಸಲಾಗುತ್ತದೆ. ವರ್ಷದ ಹಿಂದೆ ಅಂತಹ ನಕಲಿ ಕಾರ್ಯಾಚರಣೆಯಲ್ಲಿ ಉಡುಪಿ ಕೃಷ್ಣಮಠಕ್ಕೆ ಉಗ್ರರು ಬಾಂಬ್ ಇಡುವುದಕ್ಕೆ ಬಂದ ನಕಲಿ ಉಗ್ರನನ್ನು ಪೊಲೀಸರು ಮಠದೊಳಗೆ ಹಿಡಿದಿದ್ದರು. ಕೃಷ್ಣಮಠದ ದ್ವಾರಗಳಲ್ಲಿರುವ ಮೆಟಲ್ ಡಿಟೆಕ್ಟರ್, ಸಿ.ಸಿ. ಕ್ಯಾಮರಾಗಳಿಂದ ಕೃಷ್ಣ ಮಠದ ರಕ್ಷಣೆ ಸಾಧ್ಯವಾಗುವುದಿದ್ದರೆ, ಪೊಲೀಸರೇ ನಿಯೋಜಿಸಿದ್ದ ನಕಲಿ ಉಗ್ರ ಮಠದೊಳಗೆ ಪ್ರವೇಶಿಸುವುದಕ್ಕೆ ಮೊದಲೇ ಸಿಕ್ಕಿ ಬೀಳಬೇಕಾಗಿತ್ತು. ಹಾಗಾಗಲಿಲ್ಲ, ಪೊಲೀಸ್ ಇಲಾಖೆಯೇ ಈ ನಕಲಿ ಕಾರ್ಯಾಚರಣೆಯ ಮೂಲಕ ಕೃಷ್ಣಮಠಕ್ಕೆ ಸಾಕಷ್ಟು ರಕ್ಷಣೆ ಇಲ್ಲ ಎಂಬುದನ್ನು ತೋರಿಸಿಕೊಟ್ಟಿತ್ತು.
-ಸುಭಾಶ್ಚಂದ್ರ ಎಸ್. ವಾಗ್ಳೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement