ಆಯತಪ್ಪಿ ಕೆರೆಗೆ ಬಿದ್ದು ಕಾರ್ಮಿಕ ಸಾವು
ಬಂಟ್ವಾಳ: ಕೂಲಿ ಕಾರ್ಮಿಕ ಆಯತಪ್ಪಿ ದಾರಿ ಬದಿಯಲ್ಲಿನ ತೋಟದ ಕೆರೆಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ವಿಟ್ಲ ಪಡ್ನೂರು ಗ್ರಾಮದಲ್ಲಿ ನಡೆದಿದೆ. ವಿಟ್ಲ ಪಡ್ನೂರು ಗ್ರಾಮದ ಪಡಾರು ನಿವಾಸಿ ನಾರಾಯಣ ಭಟ್ ಎಂಬವರ ಮನೆಯಲ್ಲಿ ಕೂಲಿ ಕಾರ್ಮಿಕರಾಗಿದ್ದ ಕುಡ್ತಮುಗೇರು ಕರ್ಯೆಮಜಲು ನಿವಾಸಿ ಜಗನ್ನಾಥ ಪೂಜಾರಿ (38) ಮೃತರು. ಸಂಜೆ ಹೊತ್ತು ಅಡಕೆ ಕೊಯ್ಲು ಮುಗಿಸಿ ಮಾಲೀಕರ ಮನೆಗೆ ಬರುತ್ತಿದ್ದ ಜಗನ್ನಾಥ ಪುಜಾರಿ ದಾರಿ ಬದಿಯಲ್ಲಿನ ತೋಟದ ಕೆರೆಗೆ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಮೃತರಿಗೆ ಪತ್ನಿ ಹಾಗೂ ಮೂರು ಹೆಣ್ಣುಮಕ್ಕಳು ಇದ್ದಾರೆ. ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ತೋಟಕ್ಕೆ ಉರುಳಿದ ಪಿಕಪ್
ಬಂಟ್ವಾಳ: ಅಡುಗೆ ಅನಿಲ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪಿಕಪ್ ರಸ್ತೆ ಬದಿಯ ತೋಟಕ್ಕೆ ಉರುಳಿ ಬಿದ್ದ ಘಟನೆ ವಿಟ್ಲ ಪಡ್ನೂರು ಗ್ರಾಮದ ಕಡಂಬು ಎಂಬಲ್ಲಿ ಗುರುವಾರ ಸಂಜೆ ಸಂಭವಿಸಿದೆ. ಕಡಂಬು ಎಂಬಲ್ಲಿಯ ಇಂಡಿಯನ್ ಗ್ಯಾಸ್ ಅವರಿಗೆ ಸಂಬಂಧಿಸಿದ ಪಿಕಪ್ ವಾಹನದಲ್ಲಿ ಸಾಲೆತ್ತೂರು ಕಡೆಯಿಂದ ವಿಟ್ಲ ಕಡೆ ಸಿಲಿಂಡರ್‌ಗಳನ್ನು ತುಂಬಿಸಿಕೊಂಡು ತೆರಳುತ್ತಿದ್ದಾಗ ಕಡುಂಬು ಕಿರು ಸೇತುವೆ ಸಮೀಪ ಎದುರಿನಿಂದ ಬಂದ ಸ್ಕೂಟರ್‌ಗೆ ಡಿಕ್ಕಿಯಾಗಿ ಪಿಕಪ್ ತೋಟಕ್ಕೆ ಉರುಳಿದೆ. ಪಿಕಪ್‌ನಲ್ಲಿ ಸಂಚರಿಸುತ್ತಿದ್ದ ಇಬ್ಬರು ಅಪಾಯದಿಂದ ಪಾರಾಗಿದ್ದಾರೆ. ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಟಿಪ್ಪರ್- ಬೈಕ್ ಡಿಕ್ಕಿ; ಸವಾರ ಗಾಯ
ಬಂಟ್ವಾಳ: ಟಿಪ್ಪರ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡ ಘಟನೆ ಮಾಣಿ ಸಮೀಪದ ಹಳೀರ ಎಂಬಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದೆ. ಮಾಣಿ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಬೈಕ್ ಹಾಗೂ ಮೆಲ್ಕಾರ್‌ನಿಂದ ಪುತ್ತೂರು ಕಡೆ ತೆರಳುತ್ತಿದ್ದ ಟಿಪ್ಪರ್ ಲಾರಿ ಮಾಣಿ ಸಮೀಪದ ಹಳೀರ ಎಂಬಲ್ಲಿ ಅಪಾಯಕಾರಿ ತಿರುವಿನಲ್ಲಿ ಮುಖಾಮುಖಿ ಡಿಕ್ಕಿಯಾಗಿವೆ. ಬೈಕ್ ಸವಾರನ ಅತಿ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಘಟನೆಗೆ ಕಾರಣ ಎನ್ನಲಾಗಿದೆ. ಗಾಯಾಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.