ಉತ್ತಮ ಕೆಲಸಕ್ಕೆ ಮಾತ್ರ ಹಣ ಪಾವತಿಸಿ: ಸೊರಕೆ
ಮಣಿಪಾಲ: ಜಿಲ್ಲೆಯಲ್ಲಿ ಯಾವುದೇ ಯೋಜನೆಯ ಅನುಷ್ಠಾನಕ್ಕೆ ಅನುದಾನದ ಕೊರತೆ ಇಲ್ಲ. ಆದರೆ, ನಡೆಸುವ ಕಾಮಗಾರಿಯ ಗುಣಮಟ್ಟ ಉತ್ತಮವಾಗಿರಬೇಕು. ಉತ್ತಮ ಕಾಮಗಾರಿ ನಿರ್ವಹಿಸಿದವರಿಗೆ ಮಾತ್ರ ಹಣಪಾವತಿ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮುಖ್ಯಮಂತ್ರಿ ನಗರೋತ್ಥಾನ ಕಾರ್ಯಕ್ರಮದಡಿಯಲ್ಲಿ ಕೈಗೊಳ್ಳಲಾದ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಡುಪಿ ಜಿಲ್ಲೆಗೆ ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಡಿ ರು. 41.54 ಕೋಟಿ ಅನುದಾನ ವಿವಿಧ ಕಾಮಗಾರಿಗಳಿಗೆ ಬಿಡುಗಡೆಯಾಗಿದೆ. ಅದರಲ್ಲಿ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ರು. 6.45 ಕೋಟಿ, ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ರು. 1.55 ಕೋಟಿ, ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ರು. 1.55 ಕೋಟಿ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ರು. 3.34 ಕೋಟಿಗಳ ಕಾಮಗಾರಿಗಳು ನಡೆಯಲಿವೆ ಎಂದು ನಗರ ಯೋಜನಾಧಿಕಾರಿಗಳು ಉಸ್ತುವಾರಿ ಸಚಿವರಿಗೆ ವಿವರಿಸಿದರು.
ಉಡುಪಿಯಲ್ಲಿ ಒಟ್ಟು 17 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, 5 ಕಾಮಗಾರಿ ಸಂಪೂರ್ಣಗೊಂಡಿದೆ. ಕಾರ್ಕಳದಲ್ಲಿ 4 ಕಾಮಗಾರಿಗಳಲ್ಲಿ 3 ಪೂರ್ಣಗೊಂಡಿದೆ. ಕುಂದಾಪುರದಲ್ಲಿ 9 ಕಾಮಗಾರಿಗಳಲ್ಲಿ 1 ಪೂರ್ಣಗೊಂಡಿದೆ. ಸಾಲಿಗ್ರಾಮದಲ್ಲಿ 9 ಕಾಮಗಾರಿಯಲ್ಲಿ 6 ಸಂಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಕಚೇರಿಗೆ ತೆರಳುವ ರಸ್ತೆ ಅಭಿವೃದ್ಧಿ ಹಾಗೂ ಮಣಿಪಾಲದಲ್ಲಿ ವಾಕಿಂಗ್ಪಾತ್ ಮತ್ತು ಚರಂಡಿ, ಪಾರ್ಕ್ಗಳನ್ನೊಳಗೊಂಡ ಸುವ್ಯವಸ್ಥಿತ ಉತ್ತಮ ಮಾದರಿ ರಸ್ತೆ ನಿರ್ಮಾಣದ ಯೋಜನೆಯ ಪ್ರಸ್ತಾಪವನ್ನು ಜಿಲ್ಲಾಧಿಕಾರಿ ಡಾ.ಎಂ.ಟಿ. ರೇಜು ಅವರು ಸಭೆಯ ಮುಂದಿಟ್ಟರು. ನಗರಸಭೆಯ ಆಯುಕ್ತ ಶ್ರೀಕಾಂತ್ ರಾವ್ ಹಾಗೂ ನಗರಸಭೆಯ ಅಧಿಕಾರಿಗಳು ಇದ್ದರು.