ತೆಂಕ ಎರ್ಮಾಳು: ಬ್ರೇಕ್ವಾಟರ್ ತೆರವಿಗೆ ಸೊರಕೆ ಚಾಲನೆ
ಪಡುಬಿದ್ರಿ: ಕಳೆದ 4 ವರ್ಷಗಳಿಂದ ಮಳೆಗಾಲದ ಸಂದರ್ಭದಲ್ಲಿ ಇಲ್ಲಿನ ಎರ್ಮಾಳು, ತೆಂಕ ಗ್ರಾಮದ ಸಮುದ್ರ ತೀರದ ಪ್ರದೇಶದಲ್ಲಿ ಭಾರಿ ಕಡಲುಕೊರೆತ, ಮೀನುಗಾರಿಕಾ ರಸ್ತೆ ಕುಸಿತ, ನೂರಾರು ತೆಂಗಿನ ಮರಗಳು ಸಮುದ್ರ ಪಾಲಾಗಲು ಕಾರಣವಾದ ಉಡುಪಿ ಪವರ್ ಕಾರ್ಪೋರೇಶನ್ ಲಿ. (ಯುಪಿಸಿಎಲ್)ನ ಪೈಪ್ಲೈನ್ ರಕ್ಷಣೆಗೆ ಸಮುದ್ರದಲ್ಲಿ ನಿರ್ಮಿಸಲಾಗಿರುವ ಬ್ರೇಕ್ವಾಟರ್ ತೆರವು ಕಾರ್ಯಾಚರಣೆಗೆ ಶುಕ್ರವಾರ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ ಸೊರಕೆ ಚಾಲನೆ ನೀಡಿದರು.
ಈ ಬ್ರೇಕ್ವಾಟರ್ನಿಂದ ಸಂಕಷ್ಟಕ್ಕೊಳಗಾದ ಸ್ಥಳೀಯ ಮೀನುಗಾರರಿಗೆ ಕಳೆದ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯನ್ನು ಸಚಿವ ಸೊರಕೆಯವರು ಈಗ ಈಡೇರಿಸಿದ್ದಾರೆ. ಅದಕ್ಕಾಗಿ ಯುಪಿಸಿಎಲ್ ಸಂಸ್ಥೆಯಿಂದಲೇ ಈ ಕಾಮಗಾರಿಗೆ 92 ಲಕ್ಷ ಬಿಡುಗಡೆಗೊಳಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಯುಪಿಸಿಎಲ್ ಕಂಪನಿಯು ಎಲ್ಲೂರು ಗ್ರಾಪಂ ತೆರಿಗೆ ಬಾಕಿ ಪಾವತಿ, ಕಂಪನಿ ಸಮೀಪ ಕಾಲೋನಿಗಳಿಗೆ ರಸ್ತೆ ನಿರ್ಮಾಣ, ಬ್ರೇಕ್ವಾಟರ್ ತೆರವು ಮತ್ತು ನಾಡದೋಣಿ ಮೀನುಗಾರರಿಗೆ ಪರಿಹಾರದ ಭರವಸೆಗೆ ಸೂಕ್ತವಾಗಿ ಸ್ಪಂದಿಸಿದೆ ಎಂದು ತಿಳಿಸಿದರು.
ಕಾಪು ಕ್ಷೇತ್ರದ ಮೀನುಗಾರಿಕಾ ರಸ್ತೆಗಳ ಅಭಿವೃದ್ಧಿಗೆ 10 ಕೋಟಿ ಬಿಡುಗಡೆಗೊಳಿಸಲಾಗಿದೆ. ಕಳೆದ ಬಾರಿ ತೀವ್ರ ಕಡಲ್ಕೊರೆತ ಸಂಭವಿಸಿದ ತೆಂಕ ಗ್ರಾಮ ವ್ಯಾಪ್ತಿಯ ವಿಶ್ವನಾಥ ಕೋಟ್ಯಾನ್, ಗಂಗಾಧರ ಸುವರ್ಣ ಮತ್ತು ಲಿಂಗಪ್ಪ ಪುತ್ರನ್ ಅವರ ಮನೆ ಸಮೀಪ 85 ಮೀ. ಉದ್ದದ 3 ಶಾಶ್ವತ ತಡೆಗೋಡೆ ನಿರ್ಮಾಣವಾಗಲಿದೆ. ಉಳಿದೆಡೆ ಬ್ರೇಕ್ವಾಟರ್ ತೆರವಿನ ಕಲ್ಲುಗಳನ್ನು ತಂದು ತಡೆಗೋಡೆ ನಿರ್ಮಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ಚಂದ್ರ ಜೆ. ಶೆಟ್ಟಿ, ಪಕ್ಷದ ಮುಖಂಡರಾದ ವೈ. ಗಂಗಾಧರ ಸುವರ್ಣ, ಅಶೋಕ್ ಕುಮಾರ್ ಕೊಡವೂರು, ನವೀನ್ ಎನ್. ಶೆಟ್ಟಿ, ದೀಪಕ್ ಎರ್ಮಾಳ್, ಅಬ್ದುಲ್ ಅಜೀಜ್ ಹೆಜಮಾಡಿ, ಬಾಲಚಂದ್ರ, ಸುಮನಾ ಕಿಶೋರ್, ಶ್ರೀಧರ್ ಬಂಗೇರ, ಕಿಶೋರ್ ಕುಮಾರ್, ಸೀತಾ ವಿ. ಸುವರ್ಣ ಉಪಸ್ಥಿತರಿದ್ದರು.