ವಾರಾಹಿ ಯೋಜನೆ ಭೂಸ್ವಾಧೀನಕ್ಕೆ ಜಿಲ್ಲಾಧಿಕಾರಿ ಆದೇಶ
ಮಣಿಪಾಲ: ಕಳೆದ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ವಾರಾಹಿ ನದಿ ಕೃಷಿ ನೀರಾವರಿ ಯೋಜನೆ ಪೂರ್ಣಗೊಳಿಸಲು ಅಗತ್ಯವಿರುವ ಭೂಮಿ ಕೂಡಲೇ ಸ್ವಾಧೀನಪಡಿಸುವಂತೆ ಜಿಲ್ಲಾಧಿಕಾರಿ ಡಾ. ಮುದ್ದುಮೋಹನ್ ಕುಂದಾಪುರ ಉಪವಿಭಾಗಾಧಿಕಾರಿಗೆ ಆದೇಶಿಸಿದ್ದಾರೆ. ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಾರಾಹಿ ನದಿ ನೀರಾವರಿ ಯೋಜನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಾರಾಹಿ ಯೋಜನೆ ಅನೇಕ ಇಲಾಖೆಗಳ ವ್ಯಾಪ್ತಿಗೆ ಬರುವುದರಿಂದ ಈ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು, ಮುಖ್ಯವಾಗಿ ಕಂದಾಯ ಮತ್ತು ಅರಣ್ಯ ಇಲಾಖೆ ಪರಸ್ಪರ ಸಹಕಾರ ನೀಡಬೇಕು ಎಂದು ಸೂಚಿಸಿದರು. ಈ ಯೋಜನೆಗೆ ಅಗತ್ಯವಿರುವ ಜಮೀನು ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರಲಿದ್ದು, ಡೀಮ್ಡ್ ಅರಣ್ಯದೊಳಗಿಂದ ನೀರಾವರಿ ಕಾಲುವೆ ಹಾದು ಹೋಗಲಿದೆ, ಆದ್ದರಿಂದ ಈ ಸ್ಥಳದ ಸರ್ವೇ ನಡೆಸಿ, ಕೇಂದ್ರ ಅರಣ್ಯ ಇಲಾಖೆಗೆ ಶೀಘ್ರ ವರದಿ ಸಲ್ಲಿಸಿ ಅನುಮತಿ ಪಡೆಯುವಂತೆ ಕುಂದಾಪುರ ಉಪ ಅರಣ್ಯ ಸಂರಕ್ಷಾಣಾಧಿಕಾರಿಗೆ ಸೂಚಿಸಿದರು. ಅಪರ ಜಿಲ್ಲಾಧಿಕಾರಿ ಕುಮಾರ, ಉಪವಿಭಾಗಾಧಿಕಾರಿ ಯೋಗೇಶ್ವರ್, ವಾರಾಹಿ ನೀರಾವರಿ ಯೋಜನೆಯ ಮುಖ್ಯ ಎಂಜಿನಿಯರ್ ಆರ್. ನಟರಾಜು, ಕುಂದಾಪುರ ಉಪಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, ಕುಂದಾಪುರ ತಹಸೀಲ್ದಾರ್ ಗಾಯತ್ರಿ ನಾಯಕ್ ಮತ್ತಿತರರು ಇದ್ದರು.