ಹಿಂದಿನ ಸರ್ಕಾರ ಮಂಡಿಸಿದ್ದ ರೈಲ್ವೆಬಜೆಟ್‌ನ ಪಡಿಯಚ್ಚು: ಬ್ಲಾಕ್ ಕಾಂಗ್ರೆಸ್ ಅಭಿಮತ
ಕಾರ್ಕಳ: ರೈಲ್ವೆ ಸಚಿವ ಡಿ.ವಿ. ಸದಾನಂದ ಗೌಡರು ಮಂಡಿಸಿರುವ ಬಜೆಟ್ ಯುಪಿಎ ಆಡಳಿತ ಅವಧಿಯಲ್ಲಿ ಅಂದಿನ ಸರ್ಕಾರ ಮಂಡಿಸಿದ್ದ ಮುಂಗಡ ಪತ್ರದ ಪಡಿಯಚ್ಚು ಮತ್ತು ಮುಂದುವರಿದ ಭಾಗವೇ ಆಗಿದೆ ಅದರಲ್ಲಿ ಹೊಸತೇನಿಲ್ಲ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ತಿಳಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಬ್ಲಾಕ್ ಕಾಂಗ್ರೆಸ್, ಕರ್ನಾಟಕದವರೇ ಆದ ರೈಲ್ವೆ ಸಚಿವರಿಂದ ರಾಜ್ಯಕ್ಕೆ ಅನೇಕ ಕೊಡುಗೆಗಳನ್ನು ಜನರು ನಿರೀಕ್ಷಿಸಿದ್ದರು. ಕೊಂಕಣ ರೈಲ್ವೆ ಸೇರ್ಪಡೆಗೊಳಿಸಿ ಮಂಗಳೂರು ಪ್ರತ್ಯೇಕ ವಲಯ ಘೋಷಿಸದಿರುವುದು ಕರಾವಳಿ ಜನತೆಗೆ ನಿರಾಸೆ ತಂದಿದೆ. ಚೆನ್ನೈ- ಬೆಂಗಳೂರು- ಮೈಸೂರು ಸ್ಪೀಡ್ ರೈಲು ಪ್ರಸ್ತಾವನೆಯ ಬದಲು ಹಳಿ ಬದಲಾಯಿಸಿ ಈ ರೈಲನ್ನು ಮಂಗಳೂರಿಗೆ ಸಂಪರ್ಕಿಸಿದ್ದಲ್ಲಿ ರಾಜ್ಯದ ವಾಣಿಜ್ಯ ವ್ಯವಹಾರದ ನಿಟ್ಟಿನಲ್ಲಿ ಉಪಯುಕ್ತವಾಗುತ್ತಿತ್ತು. ಯಾಕೆಂದರೆ ಮಂಗಳೂರು ರಾಜ್ಯದ ಏಕೈಕ ಸರ್ವಋತು ಬಂದರು ಆಗಿದೆ ಎಂದು ತಿಳಿಸಿದೆ. ಹಿಂದಿನ ಅವಧಿಯಲ್ಲಿ ರೈಲ್ವೆ ಇಲಾಖೆಗೆ ವಿದೇಶಿ ಬಂಡವಾಳ ಮತ್ತು ಖಾಸಗಿ ಹೂಡಿಕೆಯನ್ನು ವಿರೋಧಿಸಿ, ಮುಂಗಡಪತ್ರ ಮಂಡನೆ ಸಂದರ್ಭದಲ್ಲಿ ಸದನದಿಂದ ಹೊರನಡೆದವರೇ ಇದೀಗ ವಿದೇಶಿ ಹಾಗೂ ಖಾಸಗಿ ಹೂಡಿಕೆಗೆ ಬಾಗಿಲು ತೆರೆದು ಸ್ವಾಗತಿಸಿರುವುದು ವಿಪರ್ಯಾಸ. ಒಟ್ಟಾರೆಯಾಗಿ ದೂರದೃಷ್ಟಿ ಕೊರತೆ ಹೊಂದಿರುವ ಈ ಮುಂಗಡಪತ್ರ ಜನರ ನಿರೀಕ್ಷೆಯನ್ನು ಹುಸಿಗೊಳಿಸಿದೆ ಎಂದು ಬ್ಲಾಕ್ ಕಾಂಗ್ರೆಸ್ ಹೇಳಿದೆ.