ಸಂಘಟಿತ ಸಂಶೋಧನೆಗೆ ಉತ್ತೇಜನ ಅಗತ್ಯ: ಶೇರಿಗಾರ್
ನಿಟ್ಟೆ: ಇಲ್ಲಿನ ತಾಂತ್ರಿಕ ಮಹಾವಿದ್ಯಾಲಯದ ರಸಾಯನ ಶಾಸ್ತ್ರ ವಿಭಾಗವು ಟೆಕ್ವಿಪ್ 2ನೇ ಹಂತದ ಪ್ರಾಯೋಜಕತ್ವದಲ್ಲಿ 'ರಸಾಯನಶಾಸ್ತ್ರ ಸಂಶೋಧನೆಯಲ್ಲಿನ ಬೆಳವಣಿಗೆಗಳು ಮತ್ತು ಉಪಯೋಗ' ಎನ್ನುವ ಕುರಿತು ಎರಡು ದಿನಗಳ ಕಾರ್ಯಾಗಾರವನ್ನು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ. ಬಿ.ಎಸ್. ಶೇರಿಗಾರ್ ಇತ್ತೀಚೆಗೆ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪ್ರತಿವರ್ಷ ದೇಶದಲ್ಲಿ ಸುಮಾರು ಶೇ. 1ರಷ್ಟು ಮಾತ್ರ ಸ್ನಾತಕೋತ್ತರ ಪದವೀಧರರು ಸಂಶೋಧನೆಗೆ ಸೇರ್ಪಡೆಗೊಳ್ಳುವುದರಿಂದ ಸಂಶೋಧನಾ ನಿರತರ ಸಂಖ್ಯೆಯು ಆಮೆರಿಕಾ ಅಥವಾ ಚೀನಾಕ್ಕೆ ಹೋಲಿಸುವಾಗ ನಮ್ಮಲ್ಲಿ ತುಂಬಾ ಕಡಿಮೆ. ಇದನ್ನು ಬಲಪಡಿಸಬೇಕಾದರೆ ಸಂಶೋಧನೆ ಅದರಲ್ಲೂ ವಿವಿಧ ಕ್ಷೇತ್ರಗಳ ಸಂಘಟಿತ ಸಂಶೋಧನೆಯನ್ನು ಉತ್ತೇಜಿಸುವುದು ಬಹುಮುಖ್ಯ ಎಂದರು.
ರಾಸಾಯನಿಕ ಸಂಯುಕ್ತಗಳ ಸಂಶೋಧನೆಯು ಔಷಧ ವಿಜ್ಞಾನದಲ್ಲಿಯೂ, ಆರೆವಾಹಕಗಳ ಸಂಶೋಧನೆಯು ಸಂವಹನಾ ಕಾರ್ಯಕ್ಷೇತ್ರದಲ್ಲಿಯೂ, ಅಣುವಿಜ್ಞಾನದಲ್ಲಿನ ಸಂಶೋಧನೆಯು ಪರಮಾಣು ರಿಯಾಕ್ಟರುಗಳಲ್ಲಿಯೂ ಹೀಗೆ ಮೂಲವಿಜ್ಞಾನದಲ್ಲಾದ ಸಂಶೋಧನೆಯು ತಂತ್ರಜ್ಞಾನದ ಬೆಳವಣಿಗೆಗಳಲ್ಲಿ ತುಂಬಾ ಸಹಕಾರಿಯಾಗಿರುವುದರಿಂದ ಇಂತಹ ಮೂಲ ವಿಜ್ಞಾನಕ್ಕೆ ಸಂಬಂಧಪಟ್ಟ ಕಾರ್ಯಾಗಾರಗಳು ಮಹತ್ವ ಪಡೆದಿವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಳೋಣ್ಕರ್ ಮಾತನಾಡಿ, ಆವಿಷ್ಕಾರ ಮತ್ತು ಸಂಶೋಧನೆಯು ಜ್ಞಾನವನ್ನು ವೃದ್ಧಿಸಿಕೊಳ್ಳಲು ಸಹಕಾರಿಯಾದರೆ, ಗಳಿಸಿದ ಜ್ಞಾನದಿಂದ ಜೀವನ ಮೌಲ್ಯ ಮತ್ತು ಸಂಪತ್ತು ವೃದ್ಧಿಯಾಗುವುದಲ್ಲದೇ ಸಮಾಜದ ಉನ್ನತಿಗೂ ಸಹ ಸಹಕಾರಿಯಾಗಬಲ್ಲದು ಎಂದರು.
ಉಪಪ್ರಾಂಶುಪಾಲ ಡಾ.ಐ. ರಮೇಶ ಮಿತ್ತಾಂತಾಯ ಮಾತನಾಡಿದರು. ಕಾರ್ಯಾಗಾರದ ಆಯೋಜಕರಾದ ವಿಭಾಗ ಮುಖ್ಯಸ್ಥ ಡಾ. ಜನಾರ್ದನ ನಾಯಕ್ ಸ್ವಾಗತಿಸಿ ಕಾರ್ಯಾಗಾರದ ರೂಪುರೇಷೆ ನೀಡಿದರು. ಸಂಯೋಜಕ ಡಾ. ರಮೇಶ್ ಭಟ್ ವಂದಿಸಿದರು. ಡಾ. ಆರತಿ ಭಟ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ. ಬಾಲಕೃಷ್ಣ ಕಲ್ಲುರಾಯ ಇದ್ದರು.