3000ಕ್ಕೂ ಅಧಿಕ ಮಂದಿಗೆ ವಿದ್ಯಾರ್ಥಿ ವೇತನ ವಿತರಣೆ
ಉಡುಪಿ: ಆರ್ಥಿಕವಾಗಿ ಮತ್ತು ಸಾಮಾಜಿಕ ಹಿಂದುಳಿದವರ ಸೇವೆಗಾಗಿಯೇ ಮುಡಿಪಾಗಿರುವ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಪ್ರತಿವರ್ಷದಂತೆ ಈ ಬಾರಿಯೂ ಜಾತಿ ಮತದ ಭೇದ ಇಲ್ಲದೇ ಉಡುಪಿ ಜಿಲ್ಲೆಯ ಸುಮಾರು 3000ಕ್ಕೂ ಅಧಿಕ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಭಾನುವಾರ ಶ್ಯಾಮಿಲಿ ಸಭಾಂಗಣದಲ್ಲಿ ವಿದ್ಯಾರ್ಥಿವೇತನ ವಿತರಿಸಲಾಯಿತು.
ಅಲ್ಲದೇ ಟ್ರಸ್ಟಿನ ಇನ್ನೊಂದು ಮುಖ್ಯ ಧ್ಯೇಯವಾಗಿರುವ ಆರ್ಥಿಕವಾಗಿ ಅಶಕ್ತರಾಗಿರುವ ಯಕ್ಷಗಾನ ಕಲಾವಿದರಿಗೂ ಸಹಾಯಧನ ವಿತರಿಸುವ ಕಾರ್ಯಕ್ರಮ ಕೂಡ ಇದೇ ಸಮಾರಂಭದಲ್ಲಿ ನಡೆಯಿತು.
ಈ ಸಮಾರಂಭವನ್ನು ಟ್ರಸ್ಟಿನ ಪ್ರವರ್ತಕರಾಗಿರುವ ಡಾ.ಜಿ. ಶಂಕರ್ ಉದ್ಘಾಟಿಸಿ, ವಿದ್ಯಾರ್ಥಿವೇತನ ಮತ್ತು ಸಹಾಯಧನ ವಿತರಿಸಿದರು. ನಂತರ ಮಾತನಾಡಿದ ಅವರು ಶಿಕ್ಷಣಕ್ಕೆ ಬಡತನ ಅಡ್ಡಿಯಾಗಬಾರದು. ಈ ನಿಟ್ಟಿನಲ್ಲಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಬಡವರ ಮನೆಯ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುತ್ತದೆ ಎಂದರು.
ಸಮಾಜದಲ್ಲಿ ಇತ್ತೀಚೆಗೆ ಹೆಣ್ಣುಮಕ್ಕಳ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯಗಳ ಬಗ್ಗೆ ತೀವ್ರಪ ಕಳವಳ ವ್ಯಕ್ತಪಡಿಸಿದ ಅವರು, ಹೆತ್ತವರು ಮತ್ತು ಶಿಕ್ಷಕರು ಹೆಣ್ಣುಮಕ್ಕಳು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಬಗ್ಗೆ ಸೂಕ್ತ ತಿಳಿವಳಿಕೆ ನೀಡಬೇಕು. ಜೊತೆಗೆ ಹೆಣ್ಣುಮಕ್ಕಳು ಸಮಾಜಿಕವಾಗಿ ಹೇಗಿರಬೇಕು ಎಂಬುದನ್ನು ತಿಳಿದು ವರ್ತಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಡಾ.ಜಿ. ಶಂಕರ್ ಉಡುಪಿಯ ಆದರ್ಶ ಆಸ್ಪತ್ರೆಯ ಡಾ. ಜಿ. ಎಸ್. ಚಂದ್ರಶೇಖರ್, ಕುಂದಾಪುರ ಸರ್ಕಾರಿ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ಚಂದ್ರ ಮರಕಾಲ ಮತ್ತು ಹಂಗಾರಕಟ್ಟೆ - ಸಾಸ್ತಾನ ರೋಟರಿ ಕ್ಲಬ್ ಅಧ್ಯಕ್ಷ ಆನಂದ ಎಂ. ಅವರನ್ನು ಸಮಾಜ ಸೇವೆಗಾಗಿ ಸನ್ಮಾನಿಸಲಾಯಿತು.
ಜೊತೆಗೆ ಎಸ್ಸೆಸ್ಸೆಲ್ಸಿ ಕನ್ನಡ ಮಾಧ್ಯಮದಲ್ಲಿ ಜಿಲ್ಲೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಹನಾ ಕಾಮತ್, ಆಂಗ್ಲ ಮಾಧ್ಯಮದಲ್ಲಿ ಭಾರ್ಗವಿ ಡಿ., ಪಿ.ಯು.ಸಿ. ಕಲಾ ವಿಭಾಗದಲ್ಲಿ ದೀಪ್ತಿ, ವಾಣಿಜ್ಯ ವಿಭಾಗದಲ್ಲಿ ದಿವ್ಯ ಪ್ರಭು ಮತ್ತು ವಿಜ್ಞಾನ ವಿಭಾಗದಲ್ಲಿ ಅಕ್ಷತಾ ನಾಯಕ್ ಅವರನ್ನು ಅಭಿನಂದಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ಸದಾನಂದ ಬಳ್ಕೂರ್ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಘಟನೆಯ ನಿಕಟಪೂರ್ವ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಮಾಜಿ ಶಾಸಕ ಯು.ಆರ್. ಸಭಾಪತಿ, ಶಾಲಿನಿ ಶಂಕರ್ ಮತ್ತು ಶ್ಯಾಮಿಲಿ ಶಂಕರ್ ಇದ್ದರು.
ಆನಂದ್ ಎಸ್.ಕೆ. ಸ್ವಾಗತಿಸಿ, ಶಂಕರ್ ಸಾಲಿಯಾನ್ ವಂದಿಸಿದರು. ಜಿಲ್ಲಾ ಮೊಗವೀರ ಯುವ ಸಂಘಟನೆಯ ಉಪಾಧ್ಯಕ್ಷ ಗಣೇಶ್ ಕಾಂಚನ್ ಕಾರ್ಯಕ್ರಮ ನಿರೂಪಿಸಿದರು.