ಮಹಿಳೆಯರ ಮೇಲಿನ ದೌರ್ಜನ್ಯ ನಿಲ್ಲಿಸಿ: ಮಹಿಳಾ ಮೋರ್ಚಾ ಆಗ್ರಹ
ಉಡುಪಿ: ಕರ್ನಾಟಕದಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳು ಇಡೀ ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸುತ್ತಿವೆ. ನಾಗರಿಕ ಸಮಾಜ ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ. ಈ ದೌರ್ಜನ್ಯಗಳನ್ನು ತಕ್ಷಣ ನಿಲ್ಲಿಸುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಭಾನುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಕಾನೂನು ವ್ಯವಸ್ಥೆಯನ್ನೇ ಅಣಕಿಸುತ್ತಿರುವ, 4 ವರ್ಷದ ಹಸುಳೆಯಿಂದ ಹಿಡಿದು 60 ವರ್ಷದ ವೃದ್ಧೆಯರನ್ನೂ ಕಂಗೆಡಿಸಿರುವಂತಹ ಇಂತಹ ಭಯಾನಕ ವಾತಾವರಣ ಸೃಷ್ಟಿಯಾಗಿದೆ. ಈ ಅಪರಾಧಿಗಳನ್ನು ಹಿಡಿದು ಕಠಿಣ ಕ್ರಮಕ್ಕೆ ಒಳಪಡಿಸದಿದ್ದರೇ ಸಮಾಜದಲ್ಲಿ ಅಲ್ಲೋಲಕಲ್ಲೋಲವೇ ಆದೀತು. ಇಂತಹ ಪರಿಸ್ಥಿತಿಗೆ ಅವಕಾಶ ನೀಡುವುದಕ್ಕೆ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಶೀಲಾ ಕೆ. ಶೆಟ್ಟಿ ನೇತೃತ್ವದಲ್ಲಿ ಈ ಮನವಿಯನ್ನು ಎಸ್ಪಿ ಡಾ. ಬೋರಲಿಂಗಯ್ಯ ಅವರಿಗೆ ಸಲ್ಲಿಸಲಾಯಿತು. ರಾಜ್ಯ ಬಿಜೆಪಿ ಕಾರ್ಯದರ್ಶಿ ಶ್ಯಾಮಲಾ ಎಸ್. ಕುಂದರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಧ್ಯಾ ರಮೇಶ್, ರಾಜ್ಯ ಪರಿಷತ್ ಸದಸ್ಯೆ ಗೀತಾ ರವಿ ಶೇಟ್, ರಾಜ್ಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ರೇಶ್ಮಾ ಉದಯ ಶೆಟ್ಟಿ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ವೀಣಾ ಎಸ್. ಶೆಟ್ಟಿ, ಜಿಲ್ಲಾ ಮೋರ್ಚಾ ಉಪಾಧ್ಯಕ್ಷೆ ರಮಾ ವೈ. ಶೆಟ್ಟಿ, ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ಹೋರಾಟ ಸಮಿತಿ ಸದಸ್ಯೆ ಪೂರ್ಣಿಮಾ ಸುರೇಶ್, ಮೋರ್ಚಾ ನಗರಾಧ್ಯಕ್ಷೆ ರಶ್ಮಿತಾ ಬಾಲಕೃಷ್ಣ ಶೆಟ್ಟಿ, ಕಾಪು ಕ್ಷೇತ್ರಾಧ್ಯಕ್ಷೆ ಶಾರದ ಪೂಜಾರಿ, ಉಡುಪಿ ಗ್ರಾಮಾಂತರ ಅಧ್ಯಕ್ಷೆ ಜಯಂತಿ ವಾಸುದೇವ ಇದ್ದರು.