ಬಸ್ರೂರು: ಶಾರದಾ ಕಾಲೇಜ್ ವಿಚಾರ ಸಂಕಿರಣ ಆ.8ರಂದು
ಕುಂದಾಪುರ: ಬಸ್ರೂರು ಶ್ರೀ ಶಾರದಾ ಕಾಲೇಜಿನ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಆ.8ರಂದು 21ನೇ ಶತಮಾನದಲ್ಲಿ ಸ್ವಾಮಿ ವಿವೇಕಾನಂದರ ಚಿಂತನೆಗಳ ಮಹತ್ವ ಎಂಬ ಪರಿಕಲ್ಪನೆ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ. ವಿವೇಕಾನಂದರ ತತ್ವಚಿಂತನೆ ಮತ್ತು ವೈಚಾರಿಕ ನಿಲುವುಗಳನ್ನು ಸಮಕಾಲೀನ ಸಂದರ್ಭದಲ್ಲಿ ಮರು ವಿವೇಚನೆಗೆ ಒಳಪಡಿಸುವ ನಿಟ್ಟಿನಲ್ಲಿ ಮುಕ್ತ ಸಂವಾದ ನಡೆಸುವ ಉದ್ದೇಶದ ಹಿನ್ನೆಲೆಯಲ್ಲಿ ಈ ವಿಚಾರ ಸಂಕಿರಣ ನಡೆಯಲಿದೆ. ಶಿಕ್ಷಣ, ರಾಷ್ಟ್ರೀಯತೆ, ಬಡತನ, ಅಸ್ಪೃಶ್ಯತೆ, ಸಾಮಾನ್ಯ ಮನುಷ್ಯ, ಸಾಮಾಜಿಕ ಸಮಾನತೆ, ಸ್ತ್ರೀಪರ ಚಿಂತನೆ ಮೊದಲಾದ ವಿಚಾರಗಳಿಗೆ ಸಂಬಂಧಿಸಿದ ವಿವೇಕಾನಂದರ ನಿಲುವುಗಳ ಕುರಿತಂತೆ ವಿಚಾರ ವಿನಿಮಯ ನಡೆಸಲಾಗುವುದು. ಕಾಲೇಜು ಅಧ್ಯಾಪಕರು, ಪತ್ರಕರ್ತರು, ಬರಹಗಾರರು ಮತ್ತು ಇತರ ಆಸಕ್ತರು ತಮ್ಮ ಅಧ್ಯಯನ ಮತ್ತು ಆಸಕ್ತಿ ಗಮನದಲ್ಲಿರಿಸಿಕೊಂಡು ಯಾವುದಾದರೊಂದು ವಿಷಯದ ಬಗ್ಗೆ ಪ್ರಬಂಧ ಮಂಡಿಸಬಹುದಾಗಿದೆ. ಸುಮಾರು 8-10 ಪುಟಗಳ ಮಿತಿಯಲ್ಲಿ ಸಿದ್ಧಪಡಿಸಿದ ಪ್ರಬಂಧವನ್ನು ಆ.5ರೊಳಗೆ ಝಛ್ಠಛಜಛ್ಛ್ಟಟಟಜ್ಜಜಛಿಅ್ಜಟಛ್ಝಟ.್ಛ್ಟಟ ಇಲ್ಲಿಗೆ ಕಳುಹಿಸಿಕೊಡಬಹುದು. ವಿಚಾರ ಸಂಕಿರಣದಲ್ಲಿ ಪ್ರಸ್ತುತಪಡಿಸಿದ ಮಹತ್ವದ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ವಿಚಾರ ಸಂಕಿರಣದ ಸಂಚಾಲಕ ಪ್ರೊ.ಕೆ. ರಾಧಾಕೃಷ್ಣ ಶೆಟ್ಟಿ (9945413819), ಸಹ ಸಂಚಾಲಕ ಪ್ರತಾಪಚಂದ್ರ ಶೆಟ್ಟಿ ಹಳ್ನಾಡು (8762822427) ಅವರನ್ನು ಸಂಪರ್ಕಿಸಬಹುದು ಎಂಬುದಾಗಿ ಕಾಲೇಜಿನ ಪ್ರಕಟಣೆ ತಿಳಿಸಿದೆ.