ಕೋಟೇಶ್ವರ ಶಾಲೆ ವನಮಹೋತ್ಸವ
ಕೋಟ: ಇಲ್ಲಿನ ಭಾರತ ವಿಕಾಸ ಪರಿಷತ್ ಮತ್ತು ಕೋಟೇಶ್ವರ ಇಂಡಿಯನ್ ಓವರಸೀಸ್ ಬ್ಯಾಂಕ್ ಸಹಯೋಗದಲ್ಲಿ ಕೋಟೇಶ್ವರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ ಆಚರಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಭಾರತ ವಿಕಾಸ ಪರಿಷತ್ ಶಾಖೆ ಅಧ್ಯಕ್ಷ ಕೆ. ಸುಕೇಶ್ ಶೇಟ್ ಮಾತನಾಡಿ, ಶಾಖೆಯ ವತಿಯಿಂದ 5000 ಸಸಿಗಳನ್ನು ವಿವಿಧ ಶಾಲೆ, ಸಂಘ ಸಂಸ್ಥೆಗಳ ಸಹಯೋಗದಲ್ಲಿ ನೆಟ್ಟು ಪೋಷಿಸುವ ಗುರಿ ಹೊಂದಲಾಗಿದೆ ಎಂದರು. ಕಾರ್ಯಕ್ರಮವನ್ನು ಕೋಟೇಶ್ವರ ಗ್ರಾ.ಪಂ. ಅಧ್ಯಕ್ಷ ರಾಜಶೇಖರ ಶೆಟ್ಟಿ ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಪ್ರಭಾವತಿ ಗಾಣಿಗ, ಇಂಡಿಯನ್ ಓವರಸೀಸ್ ಬ್ಯಾಂಕ್ನ ಬೀಜಾಡಿ ಶಾಖೆಯ ಮುಖ್ಯ ಪ್ರಬಂಧಕ ಸೋಮಕುಮಾರ ಕಾಮತ್, ಕೋಟೇಶ್ವರ ಶಾಲೆ ಮುಖ್ಯೋಪಾಧ್ಯಾಯ ಸಂಜೀವ, ಸ್ಥಳೀಯ ಹಿರಿಯ ಕೃಷಿಕ ಹನುಮಂತ ಶೇರಿಗಾರ ದೊಡ್ಡೋಣಿ, ಶಾಖೆ ಗೌರವಾಧ್ಯಕ್ಷ ಬಿ.ಎಲ್. ಉಪಾಧ್ಯಯ ಇದ್ದರು. ವಿದ್ಯಾರ್ಥಿಗಳಿಗೆ ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು. ಯೋಗೀಶ ಜೋಗಿ ಸ್ವಾಗತಿಸಿ, ನಿರೂಪಿಸಿದರು. ಮಂಜುನಾಥ ಆಚಾರ್ ವಂದಿಸಿದರು.