ಬಲಿಗೆ ಕಾದಿದೆ ಕ್ವಾರಿ!
ಪಡುಬಿದ್ರಿ: ಇಲ್ಲಿನ ಇನ್ನಾ ಗ್ರಾಪಂ ವ್ಯಾಪ್ತಿಯ ಸಾಂತೂರುಕೊಪ್ಲ ಎಂಬಲ್ಲಿ 2 ಬೃಹತ್ ಮಾನವ ನಿರ್ಮಿತ ಕಲ್ಲು ಕ್ವಾರಿಗಳು ಬಲಿಗಾಗಿ ಕಾಯುತ್ತಿವೆ.
ಖಾಸಗಿ ಭೂಮಿಯಲ್ಲಿ ಗ್ರಾನೈಟ್ ಕಲ್ಲುಗಳನ್ನು ಸ್ಫೋಟಕ ಬಳಸಿ ತೆಗೆದು ಉಂಟಾಗಿರುವ ಭಾರಿ ಗಾತ್ರದ ಹೊಂಡಗಳ ದಡದಲ್ಲಿ ಪ್ರತಿದಿನ ಸಾರ್ವಜನಿಕರು, ಶಾಲೆ ವಿದ್ಯಾರ್ಥಿಗಳು ಓಡಾಡುತ್ತಾರೆ. ಬಟ್ಟೆ ಒಗೆಯಲು, ಈಜಾಡಲು, ಮಹಿಳೆಯರು, ಮಕ್ಕಳು, ಯುವಕರು ಬರುತ್ತಾರೆ. ಇಲ್ಲಿ ಇದುವರೆಗೆ ಯಾವುದೇ ಅಪಾಯ ಸಂಭವಿಸಿಲ್ಲ, ಆದರೆ ಮುಂದೆ ಸಂಭವಿಸುವ ಸಾಧ್ಯತೆಗಳಿವೆ.
ಕಳೆದ ವರ್ಷ ಜಿಲ್ಲಾಡಳಿತ ಆದೇಶದಂತೆ ಹೊಂಡದ ಸುತ್ತ ತಡೆಬೇಲಿ ನಿರ್ಮಿಸಿದ್ದನ್ನು, ಕಲ್ಲುಕ್ವಾರಿಗೆ ಹೋಗುವ ರಸ್ತೆಗೂ ತಡೆಬೇಲಿ ಹಾಕಲಾಗಿದ್ದು ಅದನ್ನು ಕಿತ್ತೊಗೆಯಲಾಗಿದೆ.
25 ವರ್ಷಗಳಿಂದ ಈ ಕಲ್ಲುಕ್ವಾರಿಯಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಸ್ಥಳೀಯರ ವಿರೋಧದಿಂದ 2 ವರ್ಷಗಳ ಹಿಂದೆ ಸ್ಥಗಿತಗೊಳಿಸಲಾಗಿತ್ತು. ಆದರೆ ಕಲ್ಲು ತೆಗೆದು ನಿರ್ಮಾಣವಾಗಿರುವ ಸುಮಾರು 3 ಎಕ್ರೆ ವಿಸ್ತೀರ್ಣದ 60 ಅಡಿ ಆಳದ 2 ಹೊಂಡಗಳನ್ನು ಮುಚ್ಚುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಅಪಾಯಕಾರಿಯಾಗಿ ಸ್ಥಳೀಯ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.