ರೆಂಜಾಳ: ಕಲ್ಲು ಕ್ವಾರಿ ಸ್ಥಗಿತ ಆಗ್ರಹಿಸಿ ಪ್ರತಿಭಟನೆ
ಕಾರ್ಕಳ: ರೆಂಜಾಳ ಗ್ರಾಮದಲ್ಲಿ ಹಲವು ಸಮಯದಿಂದ ಗಣಿಗಾರಿಕೆ ನಡೆಯುತ್ತಿದ್ದು ಗ್ರಾಮಸ್ಥರಿಗೆ ತುಂಬಾ ತೊಂದರೆಯಾಗುತ್ತಿದೆ. ತಕ್ಷಣ ಗಣಿಗಾರಿಕೆ ನಿಲ್ಲಿಸಬೇಕು ಎಂದು ಒತ್ತಾಯಿಸಿ ರೆಂಜಾಳ ಗ್ರಾಮ ಹಿತರಕ್ಷಣಾ ವೇದಿಕೆ ಹಾಗೂ ಗ್ರಾಮಸ್ಥರು, ಕೃಷಿಕ ಮಹಿಳೆಯರು ಸೇರಿ ಸುಮಾರು 500ಕ್ಕೂ ಅಧಿಕ ಸಾರ್ವಜನಿಕರು ಗುರುವಾರ ಪ್ರತಿಭಟನೆ ನಡೆಸಿದರು.
ರೆಂಜಾಳದಲ್ಲಿ ಸ್ಥಳೀಯಾಡಳಿತದ ಪರವಾನಗಿ ಇಲ್ಲದೆ ಅಕ್ರಮವಾಗಿ ಬೆಂಗಳೂರು ಮೂಲದ ಆರ್ಎಂಸಿ ಕಲ್ಲು ಕ್ವಾರೆ ಕಾರ್ಯ ನಿರ್ವಹಿಸಿದ್ದು ಇದನ್ನು ಕೂಡಲೇ ಬಂದ್ ಮಾಡಬೇಕು ಎಂಬುದಾಗಿ ಇಲ್ಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗ್ರಾಪಂ ಅನುಮತಿ ಇಲ್ಲದೆ ಇಲ್ಲಿ ಕ್ರಶರ್ ಕಾರ್ಯನಿರ್ವಹಿಸುತ್ತಿದೆ. ಕ್ರಶರ್ ನಿಲ್ಲಿಸಲು ಗ್ರಾಪಂ ಸಭೆಯಲ್ಲಿ ನಿರ್ಣಯಕೈಗೊಳ್ಳಲಾಗಿದ್ದರೂ ಯಾವ ಪ್ರಯೋಜನವೂ ಆಗಿಲ್ಲ. ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ರೆಂಜಾಳ ಗ್ರಾಪಂ ಸದಸ್ಯರ ರಮೇಶ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನಾಕಾರರು ರೆಂಜಾಳ ಗ್ರಾಮ ಪಂಚಾಯಿತಿಯಿಂದ ಆರ್ಎಂಸಿ ಕಂಪೆನಿಯ ಕಲ್ಲು ಕ್ವಾರೆವರೆಗೆ ಮೆರವಣಿಗೆ ನಡೆಸಿದರು. ತಹಸೀಲ್ದಾರ್ ಬಾಬು ದೇವಾಡಿಗ ಪ್ರತಿಭಟನಾ ಸ್ಥಳಕ್ಕಾಗಮಿಸಿ ಭೇಟಿ ನೀಡಿ ಪರಿಶೀಲಿಸಿದರು. ಗಣಿಗಾರಿಕೆಯ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಗ್ರಾಮ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಮಹಾವೀರ ಹೆಗ್ಡೆ ಹಾಗೂ ಗ್ರಾಪಂ ಸದಸ್ಯರು ಇದ್ದರು.